ನಿತೀಶ್‍ಕುಮಾರ್‍ಗೆ ಮತ್ತೆ ಸಿಎಂ ಪಟ್ಟ
ಪಾಟ್ನಾ, ನ. 11: ಜೆಡಿಯು ಮುಖ್ಯಸ್ಥ ನಿತೀಶ್‍ಕುಮಾರ್ ಅವರು ಸತತ 6ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿ ಕೂಟ ಸರ್ಕಾರ ರಚಿಸಲು ಅಗತ್ಯವಾಗಿರುವ ``ಮ್ಯಾಜಿಕ್ ಸಂಖ್ಯೆ'' ದಾಟಿದೆ. ಇದರೊಂದಿಗೆ ಎನ್‍ಡಿಎ ಮೈತ್ರಿಕೂಟದ ಜೆಡಿ(ಯು) ನಾಯಕ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೀಪಾವಳಿ ನಂತರ ನಿತೀಶ್‍ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ಜೆಡಿ(ಯು) ನಾಯಕ ಕೆ.ಸಿ. ತ್ಯಾಗಿ ತಿಳಿಸಿದ್ದಾರೆ.
ಲಸಿಕೆ ‘ಸ್ಪುಟ್ನಿಕ್ ವಿ’ನಿಂದ ಜನರನ್ನು ರಕ್ಷಿಸಬಹುದು
ಮಾಸ್ಕೋ, ನ. 11: ಮೊದಲ ಮಧ್ಯಂತರ ವಿಶ್ಲೇಷಣೆಯ ಪ್ರಕಾರವಾಗಿ ತಾನು ಅಭಿವೃದ್ಧಿಪಡಿಸಿದ ಲಸಿಕೆ ‘ಸ್ಪುಟ್ನಿಕ್ ವಿ’ ಕೋವಿಡ್‍ನಿಂದ ಜನರನ್ನು ರಕ್ಷಿಸುವಲ್ಲಿ ಶೇ. 92 ರಷ್ಟು ಪರಿಣಾಮಕಾರಿ ಎಂದು ರಷ್ಯಾ ಹೇಳಿದೆ. ಸ್ಪುಟ್ನಿಕ್ ವಿ ಲಸಿಕೆ ಪರಿಣಾಮಕಾರಿತ್ವವು ಶೇ. 92 ರಷ್ಟಿದೆ (ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳು ಮತ್ತು ಪ್ಲಾಸ್ಮಾ ಚಿಕಿತ್ಸೆ ಪಡೆದವರ ನಡುವೆ ನಡೆಸಲಾದ 20 ದೃಢೀಕರಿಸಿದ ಕೋವಿಡ್ ಪ್ರಕರಣಗಳ ಆಧಾರದ ಮೇಲೆ ಲೆಕ್ಕಾಚಾರ) ಎಂದು ರಷ್ಯಾ ಡೈರೆಕ್ಟ್ ಇನ್‍ವೆಸ್ಟ್‍ಮೆಂಟ್ ಫಂಡ್ (ಆರ್‍ಡಿಐಎಫ್) ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಸ್ಪುಟ್ನಿಕ್ ವಿ ಲಸಿಕೆಗಾಗಿನ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಅನುಮೋದಿಸಲಾಗಿದೆ ಮತ್ತು ಬೆಲಾರಸ್, ಯುಎಇ, ವೆನೆಜುವೆಲಾ ಮತ್ತು ಇತರ ದೇಶಗಳಲ್ಲಿ ಇದು ನಡೆಯುತ್ತಿದೆ.. ಭಾರತದಲ್ಲಿ ಲಸಿಕೆಯ ಎರಡು, ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಪ್ರಸ್ತುತ, 40,000 ಸ್ವಯಂಸೇವಕರು ಸ್ಪುಟ್ನಿಕ್ ವಿ ವಿವಿಧ ಹಂತದ ಪ್ರಯೋಗದಲ್ಲಿ ನಿರತವಾಗಿದ್ದು 20 ಸಾವಿರ ಮಂದಿಯನ್ನು ಮೊದಲ ಡೋಸ್‍ಗೆ ಹಾಗೂ 16 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮೊದಲ ಮತ್ತು ಎರಡನೇ ಡೋಸ್ ಪ್ರಯೋಗಗಳಿಗೆ ಒಳಪಡಿಸಲಾಗಿದೆ.
ಮಹಿಳೆಯರ ಸುರಕ್ಷತೆಗೆ ಸರ್ಕಾರದ ಆದ್ಯತೆ
ಬೆಂಗಳೂರು, ನ. 11: ಮಹಿಳೆಯರ ಸುರಕ್ಷತೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಮಹಿಳೆಯರ ಕುರಿತು ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದ ಮುಂಭಾಗ ದ್ವಿಚಕ್ರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾನವ ಕಳ್ಳ ಸಾಗಾಣಿಕೆ ನಿಷೇಧ ದಳಕ್ಕೆ ನಿರ್ಭಯ ಯೋಜನೆಯಡಿ 751 ದ್ವಿಚಕ್ರ ವಾಹನಗಳನ್ನು ನೀಡಲಾಗಿದೆ. ಮಹಿಳೆಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದೆ. ಯೋಜನೆ ಅಡಿಯಲ್ಲಿ ರೂ. 7 ಕೋಟಿ ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ನಮ್ಮ ಸರ್ಕಾರ ಆದ್ಯತೆಯಾಗಿದೆ. ರಾಜ್ಯದಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡಲು, ಸುರಕ್ಷತೆಗಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬೆಂಗಳೂರು ಬಿಎಂಟಿಸಿ ಬಸ್‍ನಲ್ಲಿ ಸುರಕ್ಷ ಕ್ರಮ, ಗಸ್ತು ವಾಹನ, ಲಿಂಗ ಸಂವೇದನೆ ತರಬೇತಿ ನೀಡಲಾಗಿದೆ. ಸೇಫ್ ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಹಿಳಾ ಸುರಕ್ಷತೆ ಹಾಗೂ ಅವರ ರಕ್ಷಣೆ ನೀಡುವಲ್ಲಿ ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆಯರಿಗೆ ಎಲ್ಲಾ ರೀತಿಯ ಭದ್ರತೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಶ್ರಮಿಸಲಿದೆ ಎಂದು ಅವರು ತಿಳಿಸಿದರು.
ಪುರಸಭೆ ಸದಸ್ಯೆಯನ್ನು ಎಳೆದಾಡಿದ ಶಾಸಕ
ಬಾಗಲಕೋಟೆ, ನ. 11: ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಅವರು ತಮ್ಮದೇ ಪಕ್ಷದ ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರನ್ನು ಎಳೆದಾಡಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೆÇಲೀಸರು ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಾಗಲಕೋಟೆ ಎಸ್‍ಪಿ ಲೋಕೇಶ್ ಜಗಲಸರ್, ಪೆÇಲೀಸ್ ಉಪಸ್ಥಿತಿಯ ಹೊರತಾಗಿಯೂ ಜನರು ಕಾನೂನುಬಾಹಿರ ರೀತಿಯಲ್ಲಿ ವರ್ತಿಸಿದರು. ನೆರೆದಿದ್ದ ಜನರನ್ನು ಚದುರಿಸಲು ಪೆÇಲೀಸರು ಯತ್ನಿಸಿದ್ದಾರೆ. ಈ ಕುರಿತು ಮಹಿಳಾ ಸದಸ್ಯರು ಯಾರೂ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸದ ಕಾರಣ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದರು.
ತಾ. 23 ರಿಂದ ಶಾಲಾ-ಕಾಲೇಜುಗಳು ಆರಂಭ
ಅಹಮದಾಬಾದ್, ನ. 11: ಗುಜರಾತ್‍ನಲ್ಲಿ ದೀಪಾವಳಿ ರಜೆಯ ನಂತರ ತಾ. 23 ರಿಂದ ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಪುನರಾರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಗುಜರಾತ್ ಶಿಕ್ಷಣ ಸಚಿವ ಭೂಪೇಂದ್ರಸಿಂಹ ಚುಡಾಸಮಾ ತಿಳಿಸಿದ್ದಾರೆ. ಕೊರೊನಾ ವೈರಸ್ ಹರಡುವುದನ್ನು ತಡೆವುದಕ್ಕಾಗಿ ದೇಶಾದ್ಯಂತ ಜಾರಿಗೊಳಿಸಲಾದ ಲಾಕ್‍ಡೌನ್‍ನಿಂದಾಗಿ ಕಳೆದ ಮಾರ್ಚ್‍ನಿಂದ ಬಂದ್ ಆಗಿರುವ ಶಾಲೆಗಳನ್ನು ಮತ್ತೆ ಆರಂಭಿಸಲಾಗುತ್ತಿದ್ದು, ತಾ. 23 ರಿಂದ 9ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಲಿವೆ. ಆದರೆ ಹಾಜರಾತಿ ಕಡ್ಡಾಯವಲ್ಲ ಎಂದು ಸಚಿವರು ಹೇಳಿದ್ದಾರೆ. 1 ರಿಂದ 8ನೇ ತರಗತಿಗಳ ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶಾಸಕ ಮುನಿರತ್ನಗೆ ಕೋರ್ಟ್ ಶಾಕ್
ಬೆಂಗಳೂರು, ನ. 11: ನಕಲಿ ಗುರುತಿನ ಚೀಟಿ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಮುನಿರತ್ನ ಅವರಿಗೆ ಹೈಕೋರ್ಟ್ ಶಾಕ್ ನೀಡಿದೆ. 2018ರ ಚುನಾವಣೆಯ ವೇಳೆ ಪತ್ತೆಯಾದ ನಕಲಿ ಗುರುತಿನ ಚೀಟಿಗಳಿಗೆ ಸಂಬಂಧಿಸಿ ಪೆÇಲೀಸ್ ತನಿಖೆಯ ಪರಿಶೀಲನಾ ವರದಿ ಸಲ್ಲಿಸಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ನೇಮಕ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ನಕಲಿ ಗುರುತಿನ ಚೀಟಿ ಪ್ರಕರಣವನ್ನು ಪೆÇಲೀಸರು ಸರಿಯಾದ ಕ್ರಮದಲ್ಲಿ ತನಿಖೆ ಮಾಡಿಲ್ಲ ಅದಕ್ಕಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಎನ್. ಆನಂದ್ ಕುಮಾರ್ ಹಾಗೂ ಜಿ. ಸಂತೋಷ್‍ಕುಮಾರ್ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಸೂಕ್ತ ರೀತಿಯಲ್ಲಿ ತನಿಖೆ ನಡೆದಿದೆಯೆ ಇಲ್ಲವೆ ಎನ್ನುವುದನ್ನು ಪರಿಶೀಲಿಸಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ರಾಜ್ಯ ಪೆÇಲೀಸ್ ಮಹಾನಿರ್ದೇಶಕರು ನೇಮಕ ಮಾಡಬೇಕು. ಅವರು ಪರಿಶೀಲನೆ ನಡೆಸಿ ಡಿಸೆಂಬರ್ 15 ರೊಳಗೆ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‍ಗೆ ವರದಿ ನೀಡಬೇಕು ಎಂದು ಆದೇಶಿಸಿದೆ.
ಗೋಸ್ವಾಮಿಗೆ ಮಧ್ಯಂತರ ಜಾಮೀನು
ನವದೆಹಲಿ, ನ. 11: ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಇನ್ನಿಬ್ಬರಿಗೆ ರೂ. 50,000 ವೈಯಕ್ತಿಕ ಬಾಂಡ್ ಮೇಲೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. 2018ರ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಗೋಸ್ವಾಮಿ ಮತ್ತು ಇತರ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಅಷ್ಟು ಮಾತ್ರವಲ್ಲದೆ ಆದೇಶವನ್ನು ತಕ್ಷಣವೇ ಪಾಲಿಸುವಂತೆ ನೋಡಿಕೊಳ್ಳುವಂತೆ ಅದು ಪೆÇಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು. ಪ್ರಕರಣದಲ್ಲಿ ಗೋಸ್ವಾಮಿ ಹಾಗೂ ಇನ್ನಿಬ್ಬರಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ಸೋಮವಾರ ನಿರಾಕರಿಸಿದ್ದರಿಂದ ಮತ್ತು ಅದಕ್ಕಾಗಿ ಕೆಳ ನ್ಯಾಯಾಲಯಕ್ಕೆ ತೆರಳುವಂತೆ ಕೋರಿದ್ದರಿಂದ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.