ಪಾಲಿಬೆಟ್ಟ, ನ. 10: ಬೆಳ್ಳಂಬೆಳಿಗ್ಗೆ ವಾಹನ ಚಲಾಯಿಸಿಕೊಂಡು ಮನೆ ಮನೆಗಳಲ್ಲಿ ತ್ಯಾಜ್ಯ ಸಂಗ್ರಹಿಸುವ ಮೂಲಕ ಪರಿಸರ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಪಿಡಿಒ ರಾಜನ್ ಅವರ ಸೇವೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ ಕಾಣಿಸುವ ನಿಟ್ಟಿನಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಿ ಮನೆ ಮನೆಗೆ ತ್ಯಾಜ್ಯ ಸಂಗ್ರಹಿಸುವ ಕಾರ್ಯಕ್ಕೆ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಮುಂದಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಅಭಿವೃದ್ಧಿ ಅಧಿಕಾರಿ ರಾಜನ್ ಹಾಗೂ ಸದಸ್ಯರ ಕಾಳಜಿಯಿಂದ ತ್ಯಾಜ್ಯ ಮುಕ್ತ ಗ್ರಾಮವನ್ನಾಗಿಸಲು ಪಣತೊಟ್ಟಿದ್ದಾರೆ. 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಿದೆ.
ಸ್ವಚ್ಛ ಗ್ರಾಮ ಯೋಜನೆಯಡಿ ಜಿಲ್ಲಾ ಪಂಚಾಯ್ತಿ ಮೂಲಕ ವಾಹನ ಖರೀದಿಸಿ ಪೌರಕಾರ್ಮಿಕ ಸಿಬ್ಬಂದಿಗಳ ಕೊರತೆ ನಡುವೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಸ್ಯರ ಸಹಕಾರದೊಂದಿಗೆ ಬೆಳಿಗ್ಗೆ ತ್ಯಾಜ್ಯ ಸಂಗ್ರಹ ವಾಹನದಲ್ಲಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯದೆ ವಿಂಗಡನೆ ಮಾಡಿ ವಾಹನಕ್ಕೆ ನೀಡಬೇಕೆಂದು ಮನವಿ ಮಾಡಿರುವ ಅವರು ಸ್ವಚ್ಛ ಗ್ರಾಮವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕೆಂದು ಗ್ರಾಮದ ನಿವಾಸಿಗಳಿಗೆ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಪಂಚಾಯಿತಿ ಅಧ್ಯಕ್ಷೆ ಗೀತಾ ಮಾತನಾಡಿ ಕಳೆದ ಹಲವು ವರ್ಷಗಳಿಂದ ಸಮಸ್ಯೆಯಾಗಿದ್ದ ತ್ಯಾಜ್ಯ ವಿಲೇವಾರಿ ಇದೀಗ ಬಗೆಹರಿದಿದೆ. ಗ್ರಾಮದಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಲಾಗಿದ್ದು, ಸುಂದರ ಗ್ರಾಮವನ್ನಾಗಿಸಲು ಮುಂದಾಗಿದೆ. ಚೆನ್ನಯ್ಯನಕೋಟೆ ಕೆರೆ ಆಸುಪಾಸಿನಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ಸುಂದರ ಉದ್ಯಾನವನವಾಗಿ ಮಾಡಲಾಗಿದ್ದು, ಗ್ರಾಮ ಶುಚಿಯಾಗಿಡಲು ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ .
ಮಹಿಳಾ ಸಂಘಟನೆಯ ಕಾರ್ಯಕರ್ತೆ ಇಂದಿರಾ ಮಾತನಾಡಿ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಅಭಿವೃದ್ಧಿ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಿ ಗ್ರಾಮವನ್ನು ಸ್ವಚ್ಛವಾಗಿಡಲು ಮುಂದಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್ ತ್ಯಾಜ್ಯ ಸಂಗ್ರಹ ವಾಹನದಲ್ಲಿ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿಗೆ ಮುಂದಾಗಿರುವುದು ಶ್ಲಾಘನೀಯ. ಸುಂದರ ಪರಿಸರ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕೆಂದರು. ಈ ಸಂದರ್ಭ ಪಂಚಾಯಿತಿ ಸದಸ್ಯರುಗಳು ಹಾಗೂ ಸ್ಥಳೀಯರು ಹಾಜರಿದ್ದರು.
ವರದಿ : ಪುತ್ತಂ ಪ್ರದೀಪ್