ನಾಪೋಕ್ಲು, ನ. 11: ಸಮೀಪದ ಕಿರುಂದಾಡು ಗ್ರಾಮದ ಮೂಕಂಡಾಣೆ ಪೈಸಾರಿ ನಿವಾಸಿಗಳ ಸ್ವಾಧೀನದಲ್ಲಿದ್ದ ಜಾಗಕ್ಕೆ ತೋಟದ ಮಾಲೀಕರೊಬ್ಬರು ಬೇಲಿ ಹಾಕಲು ಮುಂದಾದ ಹಿನ್ನೆಲೆಯಲ್ಲಿ ಪೈಸಾರಿ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ಕೊಣಂಜಗೇರಿ ಗ್ರಾಮ ಪಂಚಾಯಿತಿಯ ಕಿರುಂದಾಡು ಗ್ರಾಮದ ಮೂಕಂಡಾಣೆ ಪೈಸಾರಿಯಲ್ಲಿ ಸುಮಾರು 55 ಕುಟುಂಬಗಳು ಆಶ್ರಯ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಇವರ ಸ್ವಾಧೀನದಲ್ಲಿದ್ದ ಜಾಗಕ್ಕೆ ಕಳೆದ ಎರಡು ದಿನಗಳ ಹಿಂದೆ ಸಮೀಪದ ತೋಟದ ಮಾಲೀಕ ಎ.ಎ. ಮಂಜುನಾಥ ಮತ್ತು ಮಕ್ಕಳು ತಂತಿಬೇಲಿ ಹಾಕಲು ಮುಂದಾಗಿದ್ದರು. ಈ ಬಗ್ಗೆ ಪೈಸಾರಿ ನಿವಾಸಿಗಳು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ಕಂದಾಯ ಇಲಾಖೆಗೆ ಸರ್ವೆಗೆ ಮನವಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ ಸಂದರ್ಭ ಪೈಸಾರಿ ನಿವಾಸಿಗಳು ತಮ್ಮ ಸ್ಥಳಕ್ಕೆ ಮಾಲೀಕರು ಅತಿಕ್ರಮಣ ಮಾಡಿ ಬೇಲಿ ಹಾಕಿರುವುದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಕೊಣಂಜಗೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಖಾದಿರ ಉಮೇಶ್ ಪಳಂಗಪ್ಪ ಹಾಗೂ ಇನ್ನಿತರ ಗ್ರಾಮಸ್ಥರು ಇತ್ತಂಡಗಳ ಅಹವಾಲು ಆಲಿಸಿ ಎಲ್ಲರಿಗೂ ಒಪ್ಪಿಗೆಯಾಗುವಂತೆ ಪರಿಹಾರ ಸೂಚಿಸಿದರು.
ಮಾಲೀಕ ಮಂಜುನಾಥ ಅವರ ತೋಟಕ್ಕೆ ತೆರಳಲು 12 ಅಡಿ ರಸ್ತೆ ಬಿಟ್ಟುಕೊಡುವುದು, ಉಳಿದ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಎಂಬ ಎರಡು ನಿಬಂಧನೆಗಳಿಗೆ ಇತ್ತಂಡಗಳ ಲಿಖಿತ ಒಪ್ಪಿಗೆ ಪಡೆಯಲಾಯಿತು. ಈ ಸಂದರ್ಭ ಗ್ರಾಮಸ್ಥರಾದ ಮುಕ್ಕಾಟಿರ ಪುಟ್ಟು ಕುಶಾಲಪ್ಪ, ಬಿಟ್ಟೀರ ಅಪ್ಪಾಜಿ, ತೋಟದ ಮಾಲೀಕ ಎ.ಎ.ಮಂಜುನಾಥ್, ಮಗ ಎ.ಎಂ. ನರೆಂದ್ರ, ಉಪತಹಶೀಲ್ದಾರ್ ಸಿದ್ದರಾಜು, ಕಂದಾಯ ಪರಿವೀಕ್ಷಕ ಶಿವಕುಮಾರ್, ಸಿಬ್ಬಂದಿಗಳು ಹಾಗೂ ಪೈಸಾರಿ ನಿವಾಸಿಗಳು ಹಾಜರಿದ್ದರು.