ಕರಿಕೆ, ನ. 11: ಇತ್ತೀಚಿನ ದಿನಗಳಲ್ಲಿ ವಿಪರೀತ ಮಳೆ ,ವಿವಿಧ ರೋಗ,ಬೆಳೆ ಕೊರತೆ ಸೇರಿದಂತೆ ಒಂದಲ್ಲ ಒಂದು ಸಮಸ್ಯೆಗಳಿಂದ ಪರದಾಡುತ್ತಿರುವ ರೈತರಿಗೆ ಇದೀಗ ಮಂಗನ ಕಾಟ ಬಹು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ರೈತರು ಬೆಳೆದ ಬಾಳೆ, ಅಡಿಕೆ, ತೆಂಗು, ಜೋಳ, ಭತ್ತ, ರಾಗಿ, ಮರಗೆಣಸು, ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ತಿಂದು ನಷ್ಟ ಉಂಟು ಮಾಡುತ್ತಿದ್ದ ಮಂಗಗಳು ಇದೀಗ ಕರಿಕೆ, ಸಂಪಾಜೆ, ಪೆರಾಜೆ, ಚೆಂಬು ಭಾಗಗಳಲ್ಲಿ ತೆಂಗು ಬೆಳೆಗೆ ಕಣ್ಣು ಹಾಕಿವೆ. ಐವತ್ತರಿಂದ ನೂರು ಸಂಖ್ಯೆಯಲ್ಲಿ ಕೋತಿಗಳು ತಂಡೋಪ ತಂಡವಾಗಿ ತೆಂಗಿನ ತೋಟಕ್ಕೆ ದಾಳಿ ಮಾಡಿ ಎಳನೀರು ಕುಡಿಯುತ್ತಿವೆ. ವಿವಿಧೆಡೆಗಳಲ್ಲಿ ದಿನವೊಂದಕ್ಕೆ ಸುಮಾರು ಐನೂರಕ್ಕೂ ಅಧಿಕ ಎಳನೀರು ಕಚ್ಚಿ ಕುಡಿಯುತ್ತಿವೆ.