ಮಡಿಕೇರಿ, ನ. 11: ಪ್ರವಾಸಿ ಕೇಂದ್ರವಾಗಿ ದೇಶದಲ್ಲಿ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಹೊಸತೊಂದು ಕ್ರಾಂತಿ ಶುರುವಾಗಿದೆ. ಜಿಲ್ಲೆಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವುದು ಒಂದೆಡೆಯಾದರೆ, ಕೆಲವೊಂದು ಪ್ರವಾಸಿಗರ ನಿರ್ಲಕ್ಷ್ಯಧೋರಣೆ ಯಿಂದಾಗಿ ಜಿಲ್ಲೆ ಮಲಿನವಾಗುತ್ತಿದೆ ಎಂಬ ಆರೋಪ-ಆಕ್ಷೇಪಗಳು ಅಲ್ಲಲ್ಲಿ ವ್ಯಕ್ತಗೊಳ್ಳುತ್ತಿವೆ. ಇದಕ್ಕೆ ಹೊಸಮುಖದ ಹಲವರು ತೋರುವ ದುರ್ವರ್ತನೆಯೊಂದಿಗೆ ಸಿಕ್ಕಿದೆಡೆಯಲ್ಲಿ ಕಸಗಳು ತಂದು ರಾಚುವುದು ಒಂದು ಕಾರಣವಾಗಿದೆ.
ಪ್ರಾಕೃತಿಕವಾಗಿ ಗಮನ ಸೆಳೆಯುವ ಹಾಗೂ ಇತರೆಡೆಗಳಿಗೆ ಹೋಲಿಸಿದರೆ ಕೊಡಗು ವಿಭಿನ್ನವಾ ಗಿದೆ. ಇಲ್ಲಿ ಇನ್ನಿತರ ಹಲವು ನಗರ-ಪಟ್ಟಣಗಳಂತೆ ಹೆಚ್ಚು ಕೊಳಕು ಕಂಡು ಬರುವುದಿಲ್ಲ. ಇಂತಹ ಪ್ರದೇಶವನ್ನು ಮಲಿನಗೊಳಿಸುವುದು ಸಹಜವಾ ಗಿಯೇ ಸ್ಥಳೀಯರನ್ನು ಕೆರಳಿಸುತ್ತಿದೆ. ಪದೇ.. ಪದೇ ಇಂತಹ ಪ್ರಸಂಗಗಳು ಎದುರಾಗುತ್ತಿರುವುದ ರಿಂದ ಇದೀಗ ಜಿಲ್ಲೆಯಲ್ಲಿ ಒಂದು ರೀತಿಯ ‘ಕಸಾಂದೋಲನ’ ಕಂಡುಬರುತ್ತಿದೆ.
ವಾಹನಗಳಲ್ಲಿ ತೆರಳುವಾಗ, ಅಲ್ಲಲ್ಲಿ ಕಸವನ್ನು ತಂದು ರಸ್ತೆ ಬದಿಯಲ್ಲಿ ಎಸೆಯುವುದು ಪ್ರಕೃತಿಯ ಪ್ರೇಮಿಗಳ ಮೂಲಕ ತಡೆಹಿಡಿಯಲ್ಪ ಡುತ್ತಿದೆ. ಮಾತ್ರವಲ್ಲದೆ ಕಸ ಹಾಕಿದ ವರಿಂದಲೇ ಅದನ್ನು ತೆಗೆಸುವುದು, ಪೊಲೀಸರ, ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ಇದಕ್ಕೆ ತಡೆಯೊಡ್ಡು ವುದು, ಸಾಮಾಜಿಕ ಜಾಲತಾಣಗಳ ಮೂಲಕ ಇದರ ವೀಡಿಯೋಗಳನ್ನು ಹರಿಯಬಿಟ್ಟು ಎಚ್ಚರಿಕೆಯ ಸಂದೇಶಗಳು ರವಾನೆಯಾಗುತ್ತಿರು ವುದು ಈಗಿನ ಬೆಳವಣಿಗೆ. ಕೆಲವಾರು ಯುವಕರೊಂದಿಗೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಈ ಆಂದೋಲನದಲ್ಲಿ ಭಾಗಿಗಳಾಗುತ್ತಿ ದ್ದಾರೆ. ಕೇವಲ ಪ್ರವಾಸಿಗರು ಮಾತ್ರ ವಲ್ಲ, ಸ್ಥಳೀಯರು ತೋರುತ್ತಿರುವ ನಿರ್ಲಕ್ಷ್ಯವೂ ತರಾಟೆಗೆ ಒಳಗಾಗುತ್ತಿವೆ.
ಇತ್ತೀಚೆಗೆ ಮಡಿಕೇರಿ ಸನಿಹದ ಕಡಗದಾಳು ಗ್ರಾ.ಪಂ.ನ ಕತ್ತಲೆಕಾಡು ಪ್ರದೇಶದಲ್ಲಿ ಸ್ಥಳೀಯರೇ ಆದ ವರ್ಕ್‍ಶಾಪ್‍ನವರು ತಂದು ಹಾಕಿದ್ದ ಒಂದು ಲಾರಿ ಲೋಡ್‍ನಷ್ಟು ತ್ಯಾಜ್ಯವನ್ನು ಅದನ್ನು ಹಾಕಿದವರು ಯಾರೆಂದು ಒಂದು ರೀತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ಕಂಡುಹಿಡಿದು ಅವರಿಂದಲೇ ತೆಗೆಸಲಾಗಿತ್ತು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದವರು ಕಡಗದಾಳು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಅವರು.
ಇದಾದ ಬೆನ್ನಲ್ಲೇ ಮತ್ಯಾರೋ ಪಿಜ್ಹಾಃದ ತ್ಯಾಜ್ಯವನ್ನು ಒಳಗೊಂಡ ಹಲವು ಬಾಕ್ಸ್‍ಗಳನ್ನು ಮುಖ್ಯ ರಸ್ತೆ ಬದಿಯಲ್ಲಿ ಎಸೆದಿದ್ದನ್ನು ಗಮನಿಸಿ ಈ ಪ್ಯಾಕ್‍ನಲ್ಲಿ ದೊರೆತ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಅವರನ್ನು ಕಂಡುಹಿಡಿಯಲಾಗಿತ್ತು. ಬಳಿಕ ಇವರನ್ನೂ ತರಾಟೆಗೆ ತೆಗೆದುಕೊಂಡು ಜಿಲ್ಲೆಯಿಂದ ಸುಮಾರು 80 ಕಿ.ಮೀ. ದೂರ ತೆರಳಿದ್ದ ಇವರನ್ನು ಪೊಲೀಸರ ಸಹಕಾರವನ್ನು ಪಡೆದು ಮರಳಿ ಸ್ಥಳಕ್ಕೆ ಕರೆಸಿ ಕಸ ತೆಗೆಸಿದ್ದು ಇದೀಗ ಭಾರೀ ಸುದ್ದಿಗೆ ಗ್ರಾಸವಾಗಿದೆ.
ತಿಮ್ಮಯ್ಯ ಹಾಗೂ ಸ್ನೇಹಿತರ ಈ ಕೆಲಸಕ್ಕೆ ಭಾರೀ ಪ್ರಶಂಸೆಯೂ ವ್ಯಕ್ತಗೊಂಡಿರುವುದಲ್ಲದೆ, ರಾಷ್ಟ್ರಮಟ್ಟದ ಸುದ್ದಿವಾಹಿನಿ, ಪತ್ರಿಕೆಗಳು, ದೆಹಲಿಯ ಎಫ್‍ಎಂ ರೇಡಿಯೋಗಳಲ್ಲೂ ಇದು ಒಂದು ರೀತಿಯ ಸ್ಫೋಟಕ ಸುದ್ದಿ ಯಾಗಿ ಭಿತ್ತರವಾಗಿದೆ. ಒಂದೆರಡು ದಿನಗಳ ಹಿಂದೆ ಬೇತ್ರಿಯಲ್ಲಿ ಲಾರಿಯೊಂದರಲ್ಲಿ ಆಗಮಿಸಿದ್ದ ವ್ಯಕ್ತಿಗಳು ಕಾವೇರಿ ನದಿಗೆ ಕಸ ಎಸೆಯಲು ಮುಂದಾಗಿದ್ದನ್ನು ಬಡುವಂಡ ಅರುಣ್ ಅಪ್ಪಚ್ಚು ಹಾಗೂ ಇತರರು ತಡೆಹಿಡಿದಿದ್ದು ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ಕಸ ತಂದು ಹಾಕುತ್ತಿರುವವರನ್ನು ಹಿಡಿದು ಅವರಿಂದಲೇ ಅದನ್ನು ತೆಗೆಸಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುತ್ತಿರುವುದು ತಪ್ಪೆಸಗುವ ಮಂದಿಗೆ ಒಂದು ರೀತಿಯಲ್ಲಿ ಎಚ್ಚರಿಕೆಯ ಕರೆಗಂಟೆಯಾಗಿದೆ.
ಜಿಲ್ಲೆಯನ್ನು ಕಸಮುಕ್ತ ಹಾಗೂ ಪ್ಲಾಸ್ಟಿಕ್ ಮುಕ್ತಗೊಳಿಸಿ ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳುವ ಈ ಪ್ರಯತ್ನಗಳು ಶ್ಲಾಘನೀಯವೇ ಆಗಿದೆ. ಆದರೆ ವಿಪರ್ಯಾಸವೆಂದರೆ ಜಿಲ್ಲಾ ಕೇಂದ್ರವಾದ ಮಡಿಕೇರಿಯೂ ಸೇರಿದಂತೆ ಹಲವು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಸವಿಲೇವಾರಿ ಸೂಕ್ತ ರೀತಿಯಲ್ಲಿ ಆಗದಿರುವುದು ಬೇಸರದ ಸಂಗತಿಯಾಗಿದೆ.
ದಿನಂಪ್ರತಿ ಸ್ಥಳೀಯವಾಗಿ ನಿರ್ವಹಣೆಯಾಗಬೇಕಾದ ಕಸದ ರಾಶಿ ಅಲ್ಲಲ್ಲಿ ರಾರಾಜಿಸುವ ದೃಶ್ಯದ ಬಗ್ಗೆ ಸಾರ್ವಜನಿಕರೂ ಕೂಡ ಹೆಚ್ಚು ಮುತುವರ್ಜಿ ವಹಿಸಬೇಕಿದೆ. ಸ್ಥಳೀಯ ಸಂಸ್ಥೆಗಳು, ಜಿಲ್ಲಾಡಳಿತ ಕೂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗುವುದು ಅಗತ್ಯವಾಗಿದೆ.
-ಶಶಿ ಸೋಮಯ್ಯ