ಸೋಮವಾರಪೇಟೆ, ನ. 10: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಹಂಚಿನಳ್ಳಿ-ಕುಮಾರಳ್ಳಿ ಗ್ರಾಮದಲ್ಲಿ ದಲಿತ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತಕ್ಷಣ ಆರೋಪಿ ಗಳನ್ನು ಬಂಧಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಟಿ.ಈ. ಸುರೇಶ್, ಕುಮಾರಳ್ಳಿ ಗ್ರಾಮದ ಚಂಗಪ್ಪ ಮತ್ತು ಗಣೇಶ್ ಸಹೋದರರು ಸ.ನಂ. 1/325ರ 4 ಎಕರೆ ಜಾಗದಲ್ಲಿ ಕೃಷಿ ಮಾಡಿದ್ದಾರೆ. ಇದರಲ್ಲಿ 1.52 ಎಕರೆಯಲ್ಲಿ ಕಾಫಿ ಮತ್ತು ಏಲಕ್ಕಿ ಬೆಳೆಯನ್ನು ಬೆಳೆದಿದ್ದಾರೆ. ಇದಕ್ಕೆ ಒತ್ತಿಕೊಂಡಿರುವ ಜಾಗವನ್ನು ಆಂದ್ರದ ಗಿರಿಬಾಬು ಎಂಬವರು ಖರೀದಿಸಿದ್ದು, ಚಂಗಪ್ಪ ಅವರ ಜಾಗದಲ್ಲಿದ್ದ ಕಾಫಿ ಮತ್ತು ಏಲಕ್ಕಿ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಗಿರಿಬಾಬು ಅವರು ಚಂಗಪ್ಪ ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದು, ಪೊಲೀಸರು ಚಂಗಪ್ಪ ಅವರನ್ನು ಕರೆಸಿ, ಗಿರಿಬಾಬು ಪರವಾಗಿ ಹೇಳಿಕೆ ಪಡೆದು ಎಚ್ಚರಿಕೆ ನೀಡಿದ್ದಾರೆ. ನಂತರ ಗಿರಿಬಾಬು ಸೇರಿದಂತೆ ಇತರರು ತೋಟಕ್ಕೆ ತೆರಳಿ ಕಾಫಿ, ಏಲಕ್ಕಿ ಗಿಡಗಳನ್ನು ನಾಶಮಾಡಿದ್ದಾರೆ. ಈ ಸಂದರ್ಭ ಚಂಗಪ್ಪ ಮತ್ತು ಗಣೇಶ್ ಅವರುಗಳಿಗೆ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತಾ. 3ರಂದು ಪೊಲೀಸ್ ದೂರು ನೀಡಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ತಕ್ಷಣ ಆರೋಪಿಗಳ ಬಂಧನವಾಗದಿದ್ದರೆ ತಾ. 16 ರಂದು ಸೋಮವಾರಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆ.ಎಲ್. ಜನಾರ್ಧನ್, ಖಜಾಂಚಿ ಎಸ್.ಎ. ಪ್ರತಾಪ್, ಕಾರ್ಯದರ್ಶಿ ಹೆಚ್.ಕೆ. ಮಹೇಶ್, ಪೋಷಕರಾದ ಸತೀಶ್ ಅವರುಗಳು ಉಪಸ್ಥಿತರಿದ್ದರು.