ಮಡಿಕೇರಿ, ನ. 10: ಈ ಶತಮಾನದ ಭೀಕರ ಮಾರಕ ಖಾಯಿಲೆ ಎಂದೇ ಪರಿಗಣಿಸಲ್ಪಟ್ಟಿರುವ ಕೋವಿಡ್ 19 ಸಾಂಕ್ರಮಿಕದಿಂದಾಗಿ ಇಡೀ ಜಗತ್ತೆ ತಲ್ಲಣಗೊಂಡಿದೆ. ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಲಕ್ಷಾಂತರ ಉದ್ಯೋಗಗಳೂ ನಾಶವಾಗಿವೆ. ಸೋಂಕು ಹರಡುವಿಕೆಯನ್ನು ತಡೆಯಲು ಸರ್ಕಾರವೇ ಲಾಕ್ ಡೌನ್ ಘೋಷಿಸಿತ್ತು. ಅಲ್ಲದೆ ಜನರು ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡದಿರುವಂತೆ ಪದೇ ಪದೇ ಮನವಿ ಮಾಡಿಕೊಂಡು ಉಲ್ಲಂಘಿಸುವವರ ಮೇಲೆ ದುಬಾರಿ ದಂಡದ ಜತೆಗೆ ಮೊಕದ್ದಮೆಯನ್ನೂ ದಾಖಲಿಸಿತ್ತು. ಆದರೆ ಸಾರ್ವಜನಿಕರು ಸರ್ಕಾರದ ಸೂಚನೆಯನ್ನು ಧಿಕ್ಕರಿಸಿ ಲಾಕ್ ಡೌನ್ ನಿಯಮಗಳನ್ನೂ ಉಲ್ಲಂಘಿಸಿ ಅಪಾರ ಪ್ರಮಾಣದ ದಂಡವನ್ನೂ ಕಟ್ಟಿದ್ದು ಆ ಮೂಲಕ ಬೊಕ್ಕಸಕ್ಕೆ ಆದಾಯ ನೀಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಮಾರ್ಚ್ 22 ರಿಂದ ಅಕ್ಟೋಬರ್ 31ರ ವರೆಗೆ ಪೆÇಲೀಸರು ಕೊರೊನಾ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದವರಿಂದ ವಸೂಲಿ ಮಾಡಿರುವ ದಂಡವೇ 7,75,800 ರೂಪಾಯಿಗಳಾಗಿವೆ. ನಿಯಮ ಉಲ್ಲಂಘಿಸಿದ 7461 ಪ್ರಕರಣಗಳಿಂದ ಈ ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ಮುಖ ಗವುಸು ಧರಿಸದ ಪ್ರಕರಣಗಳು 6231 ಆಗಿದ್ದರೆ ಸಾಮಾಜಿಕ ಅಂತರ ಕಾಪಾಡದಿರುವ ಪ್ರಕರಣಗಳು 1238 ಆಗಿವೆ.
ಇದಲ್ಲದೆ ಮಡಿಕೇರಿ ತಾಲೂಕಿನ 26 ಗ್ರಾಮ ಪಂಚಾಯಿತಿಗಳು ಮುಖಗವುಸು ಧರಿಸದಿದ್ದವರಿಂದ ಒಟ್ಟು 27,900 ರೂಪಾಯಿ ದಂಡ ವಸೂಲಿ ಮಾಡಿವೆ. ವೀರಾಜಪೇಟೆ ತಾಲೂಕಿನ 38 ಗ್ರಾಮ ಪಂಚಾಯಿತಿಗಳು 52,100 ರೂಪಾಯಿ ಮತ್ತು ಸೋಮವಾರಪೇಟೆ ತಾಲೂಕಿನ 40 ಗ್ರಾಮ ಪಂಚಾಯಿತಿಗಳು ನಿಯಮ ಉಲ್ಲಂಘಿಸಿದವರಿಂದ 74,400 ರೂಪಾಯಿಗಳ ದಂಡವನ್ನು ವಸೂಲಿ ಮಾಡಿವೆ.
ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘನೆ ಮಾಡಿದ ವಾಹನ ಚಾಲಕರಿಂದ ಒಟ್ಟು 93,75,000 ರೂಪಾಯಿಗಳ ದಂಡ ವಸೂಲಿ ಮಾಡಲಾಗಿದೆ. ಒಟ್ಟು 18,404 ವಾಹನ ಸವಾರರು ಲಾಕ್ ಡೌನ್ ಅವಧಿಯಲ್ಲೂ ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಈ ವಾಹನ ಸವಾರರಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಓಡಿಸಿರುವುದು, ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ ಧರಿಸದಿರುವುದು ಮುಂತಾದವು ಸೇರಿವೆ.
ಲಾಕ್ ಡೌನ್ ಅವಧಿಯಲ್ಲೂ ಹೆಚ್ಚು ಜನರು ನಿಯಮ ಉಲ್ಲಂಘಿಸಿರುವ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೆÇಲೀಸ್ ಅಧಿಕಾರಿ ಕ್ಷಮಾ ಮಿಶ್ರಾ ಅವರು ಪೆÇಲೀಸ್ ಇಲಾಖೆಯು ಎಲ್ಲ ಪೆÇಲೀಸ್ ಠಾಣೆಗಳ ವತಿಯಿಂದ ಹೆಚ್ಚು ಹೆಚ್ಚು ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ದಂಡ ವಿಧಿಸುವುದರಿಂದ ಮಾತ್ರ ಉಲ್ಲಂಘನೆ ಪ್ರಕರಣಗಳು ಕಡಿಮೆ ಆಗುವುದಿಲ್ಲ ಎಂದ ಅವರು ಸಾರ್ವಜನಿಕರೂ ಸ್ವಯಂ ಪ್ರೇರಿತರಾಗಿ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು. ಮುಖಗವುಸು ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಏಕೆಂದರೆ ಇದರಿಂದ ಅಂತಿಮವಾಗಿ ಅನುಕೂಲ ಆಗುವುದು ಜನರಿಗೇ ಎಂದು ಅರ್ಥಮಾಡಿಕೊಳ್ಳಬೇಕು. ಎಲ್ಲರ ಸಹಕಾರ ಇದ್ದರೆ ಮಾತ್ರ ಕೊರೊನಾ ವಿರುದ್ಧ ಹೋರಾಟ ಯಶಸ್ವಿಯಾಗುತ್ತದೆ ಎಂದರು. ಜಿಲ್ಲೆಯಲ್ಲಿ ಈಗಾಗಲೇ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗಾಗಿ ಕಾವೇರಿ ಪಡೆಯನ್ನು ರಚಿಸಿದ್ದು ಅಗತ್ಯ ಕಂಡು ಬಂದರೆ ತಾಲೂಕು ಮಟ್ಟಕ್ಕೂ ಇದನ್ನು ವಿಸ್ತರಿಸಲಾಗುವುದು ಎಂದರು.
-ಕೋವರ್ ಕೊಲ್ಲಿ ಇಂದ್ರೇಶ್