ಕಣಿವೆ, ನ. 10: ಮಕ್ಕಳಿಲ್ಲ ದವರಿಗೆ ಒಂದೇ ಚಿಂತೆ. ಮಕ್ಕಳಿಲ್ಲ ವಲ್ಲ ಎಂಬುದು. ಮಕ್ಕಳಿರುವ ಹಲವರಿಗೆ ಬೇರೆಯದೇ ಚಿಂತೆ. ಒಂದು ವೇಳೆ ಮಕ್ಕಳು ಸನ್ಮಾರ್ಗ ದಲ್ಲಿ ನಡೆಯದಿದ್ದರೆ, ಮಕ್ಕಳು ಉತ್ತಮರಾಗಲಿಲ್ಲವಲ್ಲ ಎಂಬ ಚಿಂತೆ.
ಇಲ್ಲಿ ವಯೋವೃದ್ಧೆ ಒಬ್ಬರಿ ದ್ದಾರೆ. ಅವರಿಗೆ ಮಕ್ಕಳೇ ಇಲ್ಲ. ಗಂಡನೂ ಹೊರಟು ಹೋಗಿ ಬಿಟ್ಟಿದ್ದಾರೆ. ಆದರೂ ಕೂಡ ಮೇಕೆಗಳನ್ನೇ ನನ್ನ ಮಕ್ಕಳು ಹಾಗೂ ಸರ್ವಸ್ವ ಎಂಬಂತೆ ಭಾವಿಸಿ ಜೀವನ ಸವೆಸುತ್ತಿದ್ದಾರೆ. ಅವರ ಹೆಸರು ಸಿದ್ದಮ್ಮ. 65 ರ ವಯೋವೃದ್ಧೆ ಕಣಿವೆ ಬಳಿಯ ಭುವನಗಿರಿ ನಿವಾಸಿ ದಿ. ಸಗಣಿ ಜವರಪ್ಪ ಅವರ ಪತ್ನಿ. ಸಗಣಿ ಜವರಪ್ಪ ಅಂತಾ ಇವರಿಗೆ ಏಕೆ ಹೆಸರು ಬಂತು ಅಂದರೆ, ಕಣಿವೆ ರಾಮಲಿಂಗೇಶ್ವರ ದೇವಾಲಯ ಸಮಿತಿ ವತಿಯಿಂದ ನಡೆಯುವ ದನಗಳ ಜಾತ್ರೆಯಲ್ಲಿ ಗೋವುಗಳ ಸಗಣಿ ಬಾಚುವ ಟೆಂಡರ್ ವಹಿಸಿಕೊಂಡು ಸಗಣಿ ಬಾಚುತ್ತಿದ್ದುದರಿಂದ ಈ ಹೆಸರು ಬಂತು ಎನ್ನುತ್ತಾರೆ ಸಿದ್ದಮ್ಮ. ಈ ಸಿದ್ದಮ್ಮ 5 ವರ್ಷ ಪ್ರಾಯದ ಬಾಲಕಿ ಇರುವಾಗಲೇ ಆಡುಗಳನ್ನು (ಮೇಕೆ) ಮೇಯಿಸುವ ಕೆಲಸ ಮಾಡುತ್ತಿದ್ದರಂತೆ. ಹಾಗಾಗಿ ಕಳೆದ 60 ವರ್ಷಗಳಿಂದಲೂ ಸತತವಾಗಿ ಆಡು ಮೇಯಿಸಿಕೊಂಡು ಬಂದ ಸಿದ್ದಮ್ಮ ತನಗೆ ಮಕ್ಕಳು ಆಗದೇ ಹೋದಾಗ ನಿತ್ಯದ ಕಾಯಕದ ಆಡುಗಳನ್ನೇ ಮಕ್ಕಳಂತೆ ಕಾಣುತ್ತಾ ಅವುಗಳಿಗೆ ಬೇಕಾದ ಸೊಪ್ಪು - ಸೆದೆಗಳನ್ನು ತಿನ್ನಿಸಿ ಸಾಕುತ್ತಿದ್ದಾರೆ. ಮೂಕ ಪ್ರಾಣಿಗಳಾದ ಮೇಕೆಗಳನ್ನು ಅತ್ಯಂತ ಹೆಚ್ಚು ಪ್ರೀತಿ ವಾತ್ಸಲ್ಯ ದಿಂದ ಕಾಣ ತೊಡಗಿದ ಸಿದ್ದಮ್ಮ ತನಗೆ ಮಕ್ಕಳೇ ಇಲ್ಲದ ಕೊರಗನ್ನು ಈ ಮೇಕೆಗಳು ಹಾಗೂ ಮೇಕೆಗಳ ಮರಿಗಳ ಲಾಲನೆ ಪಾಲನೆ ಪೆÇೀಷಣೆಗಳಲ್ಲಿ ಕಳೆಯುತ್ತಾ ಎಲ್ಲಾ ನೋವು ಸಂಕಟಗಳನ್ನು ಕಳೆಯುತ್ತಾ ಬಂದಂತೆ, ಒಂದು ದಿನ ಗಂಡನೂ ಅಗಲಿದ ಬಳಿಕ ಸಿದ್ದಮ್ಮ ಒಬ್ಬಂಟಿಯಾದಳು. ನಂತರ ತನ್ನ ಅಣ್ಣನ ಮಗ ರಮೇಶ ಎಂಬವರು ಈ ಸಿದ್ದಮ್ಮ ಹಾಗೂ ಮೇಕೆ ಕುಟುಂಬವನ್ನು ತನ್ನ ಮನೆಗೆ ಬರಮಾಡಿಕೊಂಡರು.
ಹುಟ್ಟುತ್ತಲೇ ಕೈ ಹಾಗೂ ಕಾಲು ಅಲುಗಾಡುವ ವಿಚಿತ್ರ ಬೇನೆಗೆ ಓಳಗಾದರೂ ಕೂಡ ಅದನ್ನು ಲೆಕ್ಕಿಸದ ಸಿದ್ದಮ್ಮ ಸ್ವಾಭಿಮಾನದಿಂದ ಸ್ವಾವಲಂಬಿಯಾಗಿಯೇ ಯಾರಿಗೂ ಹೊರೆ ಆಗದ ರೀತಿ ಮೇಕೆಗಳನ್ನು ಸಾಕಿ ಅದರಿಂದ ಬರುವ ಆದಾಯದಿಂದ ಬದುಕು ಸಾಗಿಸುತ್ತಾ ಬಂದಿದ್ದಾರೆ. ಅಗಲಿದ ಗಂಡ, ಸಾಧ್ಯವಾಗದ ಸಂತಾನ ಎಲ್ಲವನ್ನು ಮೇಕೆಗಳ ಒಡನಾಟದಲ್ಲಿ ಕಳೆಯುತ್ತಾ ಜೀವನವನ್ನು ಕ್ರಮಿಸುತ್ತಿರುವ ಸಿದ್ದಮ್ಮ ಕಳೆದ 60 ವರ್ಷಗಳ ಹಿಂದೆ ಅಂದರೆ 5 ರಿಂದ 7 ರ ಪ್ರಾಯವಿರುವಾಗ ಕೇವಲ ಕೆಲವೇ ರೂಪಾಯಿಗಳನ್ನು ಪರಿಚಿತರಿಂದ ಸಾಲವಾಗಿ ಪಡೆದು ಕೊಂಡು ಒಂದು ಮೇಕೆಯನ್ನು ಖರೀದಿಸಿ ಸಾಕ ತೊಡಗಿದರು. ನಂತರ ಒಂದು ಮೇಕೆಯಿಂದ ಆರಂಭವಾದ ಮೇಕೆ ಸಂತಾನ ಹತ್ತಾರು ಪ್ರಮಾಣದಲ್ಲಿ ಹೆಚ್ಚಳವಾಗತೊಡಗಿದವು.
ಇಲ್ಲಿ ಏಕಾಂಗಿಯಾದ ಈ ಸಿದ್ದಮ್ಮನನ್ನು ತನ್ನೊಡನೆ ಇಟ್ಟುಕೊಂಡು ಆರೈಕೆ ಮಾಡಬೇಕೆಂಬ ಅಣ್ಣನ ಮಗ ರಮೇಶನಿಗೆ ವಯಸ್ಸಾದ ಸಿದ್ದಮ್ಮನ ಮೇಲಿನ ಪ್ರೀತಿಗಿಂತ ಸಿದ್ದಮ್ಮ ಸಾಕಿರುವ ಮೇಕೆಗಳ ಹಿಂಡಿನ ಮೇಲೂ ಪ್ರೀತಿ ಬಂದಿರಲಿಕ್ಕೂ ಸಾಕು.
ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ವಯೋವೃದ್ಧ ರೆಂದರೆ ತಾತ್ಸಾರದಿಂದ ಕಾಣುತ್ತಾ ವೃದ್ಧಾಶ್ರಮದತ್ತ ದೂಡುವ ಜನ ಇರುವಾಗ, ಯಾರೂ ಇಲ್ಲದ ಸಿದ್ದಮ್ಮನಿಗೆ ಆಶ್ರಯ ಕೊಟ್ಟಿರುವುದು ಮಾತ್ರ ಪ್ರಶಂಸನೀಯ. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಸಿದ್ದಮ್ಮ, ‘ನನಗೆ ಆಡು (ಮೇಕೆ) ಗಳೆಂದರೆ ತುಂಬಾ ಇಷ್ಟ. ಅವುಗಳಿಲ್ಲದೇ ಒಂದು ಹೊತ್ತೂ ಕೂಡ ಇರೋಕಾಗಲ್ಲ. ಏನೂ ಕೆಲಸ ಮಾಡದೇ ಸುಮ್ಮನೆ ಕುಳಿತರೆ ರೋಗಗಳು ಬರುತ್ತವೆ. ತಿರುಗಾಡಿ ಕೊಂಡಿದ್ದರೆ ಮನುಷ್ಯನಿಗೆ ಆರೋಗ್ಯ. ಮೇಕೆಗಳನ್ನು ನಾನು ಕಾಲುವೆ ಏರಿ ಮೇಲೆ, ಕಾಡಂಚಿನಲ್ಲಿ ಕರ್ಕೊಂಡು ಹೋಗಿ ಸೊಪ್ಪುಗಳನ್ನು ತಿನ್ನಿಸುತ್ತೇನೆ. ಹಾಗಾಗಿ ನನ್ ಸಮಯ ಕಳೆಯೋದೆ ಗೊತ್ತಾಗಲ್ಲ. ಈ ಆಡುಗಳಿಗೂ ನಾನಂದರೆ ಇಷ್ಟ. ನಾನು ಹೋದಲ್ಲಿ ಅವುಗಳು ಹಿಂಬಾಲಿಸುತ್ತವೆ. ಅವುಗಳಿಂದಲೇ ನನ್ನ ಬದುಕು ಸಾಗ್ತಾ ಇದೆ. ಜೀವನ ನಿರ್ವಹಣೆಗಾಗಿ ಅವುಗಳನ್ನು ಮಾರಾಟ ಮಾಡೋವಾಗ ಸಂಕಟವಾಗುತ್ತದೆ. ಅಯ್ಯೋ, ಯಾರ ಜೊತೆ ಹೇಳಿಕೊಳ್ಳಲಿ ಹೇಳಿ. ನಾನೊಬ್ಬಳೇ ಕುಳಿತು ಕಣ್ಣೀರು ಹಾಕ್ತೇನೆ’ ಎಂದು ಹೇಳೋವಾಗ ಸಿದ್ದಮ್ಮನ ಕಣ್ಣಾಲಿಗಳು ತುಂಬಿ ಹೋಗಿದ್ದವು.
ಏನೇ ಆಗಲೀ ಸ್ವಾವಲಂಬಿಯಾಗಿ ಸ್ವಾಭಿಮಾನದ ಬದುಕು ಕಟ್ಟಲು ಕೈ ಹಿಡಿದಿರುವ ಆಡುಗಳಿಗೂ, ಆ ಆಡುಗಳೊಂದಿಗೆ ನಿತ್ಯದ ಹಾಡು ಪಾಡು ಗೈಯುತ್ತಿರುವ ಸಿದ್ದಮ್ಮನಿಗೆ ಶುಭವಾಗಲಿ. - ಕೆ.ಎಸ್. ಮೂರ್ತಿ