ಗೋಣಿಕೊಪ್ಪಲು, ನ. 11: ಬಾಳೆಲೆಯ ಎ.ಪಿ.ಸಿ.ಎಂ.ಎಸ್.ನ ಆಡಳಿತ ಮಂಡಳಿಗೆ ನಡೆಯುತ್ತಿರುವ ಚುನಾವಣೆಯು ರಂಗೇರಿದ್ದು ಬಿಜೆಪಿ ಪಕ್ಷದಲ್ಲಿಯೇ ಎರಡು ಗುಂಪುಗಳ ನಡುವೆ ತೀರಾ ಹಣಾಹಣಿ ನಡೆಯುತ್ತಿದೆ. ಗ್ರಾಮೀಣ ಭಾಗದ ಈ ಎ.ಪಿ.ಸಿ.ಎಂ.ಎಸ್.ಯಲ್ಲಿ ಈ ಭಾರಿ ಬಿಜೆಪಿಯ ಒಂದು ಗುಂಪಿನಿಂದ ಹೊಸ ಮುಖಗಳು ಪ್ರವೇಶ ಪಡೆಯಲು ಚುನಾವಣಾ ಕಣಕ್ಕೆ ಧುಮುಕಿವೆ. ಹಾಲಿ ಅಧ್ಯಕ್ಷ ಬೋಸ್ ಮಂದಣ್ಣನವರು ಕಳೆದ 20 ವರ್ಷಗಳಿಂದ ಈ ಎ.ಪಿ.ಸಿ.ಎಂ.ಎಸ್.ಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಇದೀಗ ಮತ್ತೊಂದು ಅವಧಿಗೆ ಚುನಾಯಿತರಾಗಲು ಇವರ ನೇತೃತ್ವದಲ್ಲಿ ಮತ್ತೊಂದು ಗುಂಪು ಚುನಾವಣಾ ಕಣದಲ್ಲಿ ಉಳಿದಿದೆ.
ವಿಶೇಷವೆಂದರೆ ಈ ಎ.ಪಿ.ಸಿ.ಎಂ.ಎಸ್.ಯಲ್ಲಿ ಬಿಜೆಪಿಯ ಎರಡು ಗುಂಪುಗಳು ಬೇರೆ ಬೇರೆಯಾಗಿ ಮತ ಯಾಚನೆ ಮಾಡುತ್ತಿರುವುದರಿಂದ ಈ ಚುನಾವಣೆಯ ಕಣ ರಂಗೇರಲು ಕಾರಣವಾಗಿದೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಬೆಂಬಲಿತರು ಹೊಸ ಮುಖಗಳಿಗೆ ಅವಕಾಶ ನೀಡಲು ಮತ ಯಾಚಿಸುತ್ತಿದ್ದಾರೆ.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಶುಕ್ರವಾರ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡು ಗುಂಪುಗಳಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಬಿಜೆಪಿಯ ತಾಲೂಕು ಸಮಿತಿಯ ಸೂಚನೆ ಮೇರೆ ನಮ್ಮ ಗುಂಪು ಸ್ಪರ್ಧಾ ಕಣದಲ್ಲಿದೆ. ಇಲ್ಲಿ ಎರಡು ಗುಂಪುಗಳಲ್ಲಿ ಮತಯಾಚನೆ ಮಾಡುತ್ತಿದ್ದೇವೆಯೇ ಹೊರತು ಬಿಜೆಪಿ ಪಕ್ಷದಿಂದ ಬಂಡಾಯವಾಗಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ.
ಬಿಜೆಪಿಯ ಹಿರಿಯರು ಇಂತಹ ಬೆಳವಣಿಗೆಗೆ ಹೇಗೆ ಅವಕಾಶ ಮಾಡಿಕೊಟ್ಟರು ಎಂಬದು ಇದೀಗ ಮತದಾರರ ಪ್ರಶ್ನೆ.