ಸೋಮವಾರಪೇಟೆ, ನ.9: ಬುರ್ಖಾ ಧರಿಸಿ ಗ್ರಾಮದ ಕಾಡಿನಲ್ಲಿ ಸಂಚರಿಸುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಯುವಕನನ್ನು ಗ್ರಾಮಸ್ಥರೇ ಬೆನ್ನಟ್ಟಿ ಹಿಡಿದ ಘಟನೆ ಸಮೀಪದ ಬೆಟ್ಟದಕೊಪ್ಪ-ಕಿಕ್ಕರಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಕಿಕ್ಕರಳ್ಳಿ ಗ್ರಾಮದಲ್ಲಿರುವ ಮೈಕ್ರೋ ಟವರ್ ಹತ್ತಿರದ ನಿವಾಸಿ ಕೊಚ್ಚೇರ ಬೋಪಯ್ಯ ಅವರ ಮನೆ ಹತ್ತಿರ ನಿನ್ನೆ ಸಂಜೆ 6.30ರ ವೇಳೆಗೆ ಕಪ್ಪುಬಣ್ಣದ ಬುರ್ಖಾ ಧರಿಸಿದ್ದ ಆಕೃತಿ ಓಡಾಡುತ್ತಿದ್ದುದು ಕಂಡುಬಂದಿದೆ. ಮಹಿಳೆಯ ರೀತಿಯಲ್ಲಿ ಕಂಡು ಬಂದ ಆಕೃತಿಯ ಬಗ್ಗೆ ಸ್ಥಳೀಯರಾದ ಗಣಪತಿ ಅವರು ಗಮನಿಸಿ, ಇತರರಿಗೆ ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ಬುರ್ಖಾ ಧರಿಸುವ ಮಂದಿ ಯಾರೂ ಇಲ್ಲದಿರುವದರಿಂದ ಅನುಮಾನಗೊಂಡು ಸ್ಥಳೀಯರು ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ಹೀಗೆ ಹುಡುಕಾಟ ನಡೆಸುತ್ತಿದ್ದ ಸ್ಥಳೀಯರಾದ ಉತ್ತಪ್ಪ, ಬೋಪಯ್ಯ, ರಮೇಶ್, ರಘು, ಲವ ಅವರುಗಳಿಗೆ ರಾತ್ರಿ 8.30ರ ಸುಮಾರಿಗೆ ಬುರ್ಖಾ ಧರಿಸಿದ್ದ ವ್ಯಕ್ತಿ ಕಾಡಿನಲ್ಲಿ ಓಡುತ್ತಿರುವದು ಕಂಡುಬಂದಿದೆ.

ಆತನನ್ನು ಬೆನ್ನಟ್ಟಿದ ಸಂದರ್ಭ ಕಾಡಿನಲ್ಲಿ ಬೈಕ್ ಪತ್ತೆಯಾಗಿದೆ. ಟಾರ್ಚ್ ಲೈಟ್ ಸಹಾಯದಿಂದ ಬೈಕ್ ಬಳಿ ತೆರಳಿದಾಗ ಬುರ್ಖಾ ಧರಿಸಿದ್ದ ಯುವಕ ಬೈಕ್ ಬಳಿಯಲ್ಲಿ ಮಕಾಡೆ ಮಲಗಿರುವದು ಕಂಡುಬಂದಿದೆ. ತಕ್ಷಣ ಆತನನ್ನು ಹಿಡಿದು ವಿಚಾರಿಸಿದ ಮೇರೆ ಮೊದಲು ತನ್ನ ಹೆಸರು ಸೂರಿ ಎಂದು ತಿಳಿಸಿದ್ದು, ಮಹಿಳೆಯ ವೇಷವನ್ನು ‘ಶೋಕಿ’ಗಾಗಿ ಧರಿಸಿದ್ದೆ ಎಂದು ತಿಳಿಸಿದ್ದಾನೆ.

ಈತನ ಮಾತಿನಿಂದ ಸಂಶಯಗೊಂಡ ಸ್ಥಳೀಯರು ವೇಷ ಬದಲಿಸಿ ಕಳ್ಳತನ ಮಾಡಲು ಆಗಮಿಸಿರಬಹುದೆಂದು ಸೋಮವಾರಪೇಟೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ರಾತ್ರಿ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಯುವಕ ಸೇರಿದಂತೆ ಬೈಕ್‍ನ್ನು ವಶಪಡಿಸಿಕೊಂಡು ಠಾಣೆಗೆ ಕರೆತಂದಿದ್ದಾರೆ.

ಪೊಲೀಸರು ವಿಚಾರಣೆಗೆ ಒಳಪಡಿಸಿದ ಸಂದರ್ಭ ಈತನೋರ್ವ ಮಾನಸಿಕ ಅಸ್ವಸ್ಥನಾಗಿದ್ದು, ತಾನು ಹುಡುಗಿಯಂತೆ ಇರಬೇಕೆಂದು ಬಯಸಿ ಓಡಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಈತ ಪಿರಿಯಾಪಟ್ಟಣದ ಬಿ.ಎಂ. ರಸ್ತೆ ನಿವಾಸಿ ಮಧು ಎಂದು ಗುರುತಿಸಿದ್ದು, ಆತನ ಸಂಬಂಧಿಕರನ್ನು ಠಾಣೆಗೆ ಕರೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.