ಕುಶಾಲನಗರ, ನ. 8: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಜಾಲವೊಂದು ಕುಶಾಲನಗರದಲ್ಲಿ ಪತ್ತೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಕುಶಾಲನಗರ ಪಟ್ಟಣ ದಲ್ಲಿ ಕೆಲವು ಬುಕ್ಕಿಗಳು ಅಕ್ರಮವಾಗಿ ಲಕ್ಷಾಂತರ ಹಣವನ್ನು ಬೆಟ್ಟಿಂಗ್ ಮಾಡುವ (ಮೊದಲ ಪುಟದಿಂದ) ಮೂಲಕ ಸಾಮಾನ್ಯರನ್ನು ವಂಚಿಸುತ್ತಿದ್ದ ಜಾಲವನ್ನು ಕುಶಾಲನಗರ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಶಾಲನಗರದ ಪ್ರವಾಸಿ ಮಂದಿರ ರಸ್ತೆ. ಶಕ್ತಿ ಬಡಾವಣೆ, ಮಾರುಕಟ್ಟೆ ರಸ್ತೆ ವ್ಯಾಪ್ತಿಯಲ್ಲಿ ಈ ದಂಧೆಗಳು ನಡೆಯುತ್ತಿದ್ದು ಲಕ್ಷಾಂತರ ಮೊತ್ತವನ್ನು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ಹೂಡಿಕೆ ಮಾಡುವ ಮೂಲಕ ಕಮಿಷನ್ ಗಳಿಸುತ್ತಿದ್ದ ಕುಳಗಳು ಪೊಲೀಸರ ವಶವಾಗಿದ್ದು ಹೆಚ್ಚಿನ ತನಿಖೆ ನಡೆದಿದೆ.ಕುಶಾಲನಗರದ ಹೊಟೇಲ್ ಉದ್ಯಮಿಯೊಬ್ಬರ ಲಕ್ಷಾಂತರ ಹಣವನ್ನು ಬ್ಯಾಂಕ್‍ಗೆ ಹಾಕಲು ಸಹಾಯಕನೊಬ್ಬನ ಮುಖಾಂತರ ಕಳುಹಿಸಿದ ಹಣ ಈ ಬೆಟ್ಟಿಂಗ್ ದಂಧೆಗೆ ಹೂಡಿಕೆಯಾದ ಪ್ರಕರಣ ವೊಂದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಈ ದಂಧೆಯ ಜಾಲ ಹೊರ ಬೀಳಲು ಕಾರಣವಾಗಿದೆ. ಹೊಟೇಲ್ ಉದ್ಯಮಿಯೊಬ್ಬರು ರೂ 1.50 ಲಕ್ಷ ಮೊತ್ತದ ಹಣವನ್ನು ಬ್ಯಾಂಕ್ ಖಾತೆಗೆ ಹಾಕಲು ಕಚೇರಿ ಸಹಾಯಕನ ಮೂಲಕ ಕಳುಹಿಸಿದ್ದು ಖಾತೆಗೆ ಹೋಗದೆ ಈ ಹಣ ಬೆಟ್ಟಿಂಗ್ ದಂಧೆಗೆ ಬಳಕೆಯಾಗಿರುವ ಪ್ರಕರಣ ತನಿಖೆ ಹಂತದಲ್ಲಿ ಬೆಳಕಿಗೆ ಬಂದಿದೆ. ತಕ್ಷಣ ಎಚ್ಚೆತ್ತ ಹೊಟೇಲ್ ಮಾಲೀಕರು ಪೊಲೀಸ್ ದೂರು ನೀಡಿದ ಹಿನ್ನಲೆಯಲ್ಲಿ ಹೆಚ್ಚಿನ ತನಿಖೆ ಸಂದರ್ಭ ಕ್ರಿಕೆಟ್ ಬೆಟ್ಟಿಂಗ್ ಜಾಲದ ಮಾಹಿತಿ ಹೊರ ಬಿದ್ದಿದೆ. ಕುಶಾಲನಗರ ಪೊಲೀಸರು ತನಿಖೆ ಕೈಗೊಂಡ ಬೆನ್ನಲ್ಲೇ ಕೆಲವು ಕಾಣದ ಕೈಗಳು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುವ ಮಾಹಿತಿಗಳು ಕೂಡಾ ಹೊರಬಿದ್ದಿದೆ. ಹತ್ತಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿರುವ ಕುಶಾಲನಗರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ವರದಿ: ಚಂದ್ರಮೋಹನ್