ಗೋಣಿಕೊಪ್ಪ ವರದಿ, ನ. 8: ಏಕಾಗ್ರತೆ ಕಾಯ್ದುಕೊಳ್ಳುವುದು ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಉಸಿರಾಟದ ಅಭ್ಯಾಸದ ಮೂಲಕ ಚೈತನ್ಯ ಹೆಚ್ಚಿಸಿಕೊಳ್ಳಬಹುದಾಗಿದೆ. ದುರಾಭ್ಯಾಸಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಪ್ರಕೃತಿ ಚಿಕಿತ್ಸಾ ವಿಭಾಗದ ವೈದ್ಯ ಡಾ. ಎ.ವಿ. ಹಿತೇಶ್ ಹೇಳಿದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ಆಶ್ರಮದ ಸಭಾಂಗಣದಲ್ಲಿ ಆಯೋಜಿಸಿದ್ದ ಉತ್ತಮ ವಿದ್ಯಾರ್ಥಿಯಾಗುವುದು ಹೇಗೆ ಎಂಬ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ದೇಹ ಮತ್ತು ಮನಸ್ಸಿನಲ್ಲಿ ಹೊಂದಾಣಿಕೆ ಕಾಣಲು ಆಹಾರ ಪದ್ಧತಿ ಹೆಚ್ಚು ಸಹಕಾರಿ. ಆದರೆ, ಇತ್ತೀಚಿನ ದಿನಗಳಲ್ಲಿ ಬದುಕಿಗೆ ಬೇಕಾಗಿದ್ದಕ್ಕಿಂತ ಹೆಚ್ಚು ಆಹಾರ ಸೇವನೆ ಆರೋಗ್ಯಕ್ಕೆ ಹಾನಿಯಾಗುತ್ತಿರುವುದು ಆತಂಕಕಾರಿ. ವಿದ್ಯಾರ್ಥಿಗಳು ಆಹಾರ ಪದ್ಧತಿಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಉದ್ಯಮಿ ಚಂದನ್ ಕಾಮತ್ ಮಾತನಾಡಿ, ಪಠ್ಯವನ್ನು ಓದುವ ಅಭ್ಯಾಸ ಹೆಚ್ಚು ಮಾಡಿಕೊಳ್ಳುವುದರಿಂದ ಶಿಕ್ಷಕರು ಪಕ್ವವಾಗುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡ ಓದುವ ಅಭ್ಯಾಸ ಹೆಚ್ಚಿಸಿಕೊಳ್ಳಬೇಕು. ಉತ್ಸಾಹ ಹೆಚ್ಚಿದಷ್ಟು ಸಾಧಿಸಲು ಅವಕಾಶ ತೆರೆದು ಕೊಳ್ಳುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ವೃತ್ತಿ ಆಯ್ಕೆಗೆ ದ್ವಿತೀಯ ಪಿಯುಸಿಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ ಮಾತನಾಡಿ, ಬದುಕಿನಲ್ಲಿ ಕಲಿಕೆಯ ಆಸಕ್ತಿ ನಿರಂತರವಾಗಿ ರೂಢಿಸಿ ಕೊಳ್ಳುವುದು ಉತ್ತಮ. ಎಲ್ಲಾರಲ್ಲಿಯೂ ಇರುವ ಪರಿಪೂರ್ಣತೆಯನ್ನು ಹೊರ ಹಾಕಲು ಸ್ವಪ್ರಯತ್ನ ಮುಖ್ಯವಾಗಿದೆ ಎಂದರು.

ಪೊನ್ನಂಪೇಟೆ ಭಾಗದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಧ್ಯಾನ ಮತ್ತು ಉಸಿರಾಟದ ಅಭ್ಯಾಸ ತರಬೇತಿ ಮಾಡಲಾಯಿತು. ಪೊನ್ನಂಪೇಟೆ ಪದವಿಪೂರ್ವ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಡ್ಯಾನಿ ಈರಪ್ಪ ಸ್ವಾಗತಿಸಿದರು. ಉಪನ್ಯಾಸಕ ಡಾ. ರಾಜೇಂದ್ರ ಪ್ರಸಾದ್ ವಂದಿಸಿದರು. ಪರಹಿತನಂದಾಜಿ ಪ್ರಾರ್ಥಿಸಿದರು.