ಕೂಡಿಗೆ, ನ 8: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯತಿ ಕಸ ಸಂಗ್ರಹ ಘಟಕದಲ್ಲಿ ಕಸ ವಿಲೇವಾರಿ ಮಾಡುವ ಯೋಜನೆಯಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿದ್ದು, ಈ ವ್ಯಾಪ್ತಿಯ ಗ್ರಾಮಗಳಿಗೆ ತೊಂದರೆ ಆಗುತ್ತದೆ. ಇದನ್ನು ತಪ್ಪಿಸಲು ಪಟ್ಟಣ ಪಂಚಾಯಿತಿಯವರು ವೈಜ್ಞಾನಿಕ ಮಾದರಿಯ ಯೋಜನೆಗಳನ್ನು ಹಮ್ಮಿಕೊಂಡು ಕಸ ವಿಲೇವಾರಿ ಘಟಕದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಈ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಭುವನಗಿರಿ ಕಸ ವಿಲೇವಾರಿ ಘಟಕದಲ್ಲಿ ಕುಶಾಲನಗರ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ನಡೆಯುವ ಸಂದರ್ಭದಲ್ಲಿ ಆಗಿನ ಜಿಲ್ಲಾಧಿಕಾರಿ ವಿಶಾಲವಾದ ಪೈಸಾರಿ ಜಾಗವನ್ನು ಗುರುತಿಸಿ ಕಂದಾಯ ಇಲಾಖೆಯ ಮೂಲಕ ಕೂಡಿಗೆ ಗ್ರಾಮ ಪಂಚಾಯಿತಿ ಅನುಮತಿ ಮೇರೆಗೆ ಪ್ರಾರಂಭ ಮಾಡಲಾಗಿತ್ತು. ಅದರಂತೆ ಇದುವರೆಗೂ ನಡೆದುಕೊಂಡು ಬರುತ್ತದೆ ಅದರೆ ಕುಶಾಲನಗರ ಪಟ್ಟಣ ಪಂಚಾಯಿತಿ ಆಗಿ ಪರಿವರ್ತನೆಯಾಗಿ ಅನೇಕ ವರ್ಷಗಳು ಕಳೆದರೂ ಕುಶಾಲನಗರದ ಮತ್ತು ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಯ ಕಸವನ್ನು ಭುವನಗಿರಿ ಕಸ ವಿಲೇವಾರಿ ಘಟಕಕ್ಕೆ ಸುರಿಯಲಾಗುತ್ತಿದೆ.
ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಘಟಕದ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಕಸ ವಿಲೇವಾರಿ ಮಾಡುತ್ತಿರುವುದರಿಂದ ದುರ್ವಾಸನೆ ಬರುತ್ತಿದ್ದು, ಪರಿಸರವು ಹಾಳಾಗುತ್ತಿದೆ. ಈಗಾಗಲೇ ಪಟ್ಟಣ ಪಂಚಾಯಿತಿ ಅಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ ಅಧ್ಯಕ್ಷರು ಮತ್ತು ಅಡಳಿತ ಮಂಡಳಿಯವರು ಮತ್ತು ಅಧಿಕಾರಿ ವರ್ಗದವರು ಖುದ್ದಾಗಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಸಲುವಾಗಿ ಹೊಸ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಬೇಕೇಂದು ಗ್ರಾಮಸ್ಥರು ಆಗ್ರಹಪಡಿಸಿದ್ದಾರೆ.