ಮಡಿಕೇರಿ, ನ. 7: ಸಾಮಾನ್ಯ ವಾಗಿ ಲೋಕೋಪಯೋಗಿ ಇಲಾಖೆ ಯೆಂದರೆ ಲೋಕದ; ಅಂದರೆ ನಾಡಿನ ಅಭಿವೃದ್ಧಿಗಾಗಿ ಇರುವ ಇಲಾಖೆ ಯೆಂದೇ ಜನಜನಿತ.., ಆದರೆ, ಇತ್ತೀಚೆಗೆ ಈ ಇಲಾಖೆಯ ಪ್ರಜ್ಞಾವಂತ ಅಧಿಕಾರಿಗಳು ಇಲಾಖೆಯ ಸವಲತ್ತುಗಳನ್ನು ತಮ್ಮ ಲೋಕಾಭಿರಾಮಕ್ಕಾಗಿ ಬಳಸಿಕೊಳ್ಳು ತ್ತಿರುವದಂತೂ ರೂಢಿಯಾಗಿಬಿಟ್ಟಿದೆ.!

ಈ ಹಿಂದೆ ಇಲಾಖೆಯ ಅಧಿಕಾರಿಯೊಬ್ಬ ತನಗೆ ಕಲ್ಪಿಸಿದ್ದ ವಸತಿಗೃಹವನ್ನು ಹೋಂಸ್ಟೇ ಆಗಿ ಬಳಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದವರ ಮೇಲೆ ಕೇಸ್ ಕೂಡ ಹಾಕಿದ್ದರು. ಇದೀಗ ಮತ್ತೋರ್ವ ಅಭಿಯಂತರ ಇದೀಗವಷ್ಟೇ ನೂತನವಾಗಿ ನಿರ್ಮಾಣವಾಗಿರುವ, ಮೊನ್ನೆಯಷ್ಟೇ ಉದ್ಘಾಟನೆಯಾಗಿರುವ ಎಸ್‍ಪಿ ಕಚೇರಿ ಬಳಿ ಇರುವ ನೂತನ ಕಟ್ಟಡವನ್ನು ಶಯ್ಯಾಗಾರವಾಗಿಸಿ ಕೊಂಡಿದ್ದಾರೆ.!

ಇನ್ನೂ ಕೂಡ ಕಚೇರಿಗಳು ಆರಂಭವಾಗದಿರುವ ಕಟ್ಟಡದಲ್ಲಿ ಅತಿಥಿ ಕೊಠಡಿ ಕೂಡ ಇದ್ದು, ಕಟ್ಟಡದ ರೂಪುರೇಷೆ, ನಿರ್ವಹಣೆಯ ಹೊಣೆಗಾರಿಕೆ ಹೊತ್ತಿರುವ ವಿವಾಹಿತ ಅಭಿಯಂತರ ತನ್ನ ಪರಸ್ತ್ರೀ ವಿವಾಹಿತೆ ಪ್ರೇಯಸಿಯನ್ನು ಕರೆಸಿಕೊಂಡು ಅತಿಥಿ ಕೊಠಡಿಯಲ್ಲಿ ಸಂಸಾರ ನಡೆಸುತ್ತಿದ್ದುದನ್ನು ಅಭಿಯಂತರನ ಪತ್ನಿ ಕಂಡು ಹಿಡಿದಿದ್ದಾರೆ.

ಹಲವು ಬಾರಿ ಈ ಬಗ್ಗೆ ಎಚ್ಚರಿಸಿದ್ದರೂ ಸರಿಯಾಗದ ಗಂಡನ ‘ಆಟ’ಕ್ಕೆ ಅಂತ್ಯಹಾಕಲು ಹೊಂಚು ಹಾಕುತ್ತಿದ್ದ ಪತ್ನಿ ನಿನ್ನೆ ರಾತ್ರಿ ತನ್ನ ಗಂಡ ಮತ್ತೊಬ್ಬಳ ಜೊತೆ ಕೊಠಡಿಯಲ್ಲಿ ಇದ್ದುದನ್ನು ಖಾತರಿಪಡಿಸಿಕೊಂಡು ಹೊರಗಿನಿಂದ ಚಿಲಕ ಹಾಕಿ ಬಿಟ್ಟರು! ಮಹಿಳಾ ಪೊಲೀಸರಿಗೆ ದೂರು ಹೋಯಿತು.!

ಇದೀಗ ಪ್ರಕರಣ ಮಡಿಕೇರಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇತ್ತ ಅಭಿಯಂತರನ ಪತ್ನಿ; ಪತಿಯ ಆಟ ನೋಡಿ ವಿಚ್ಛೇದನಕ್ಕೆ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಕಟ್ಟಡಗಳು ಲೋಕಾಭಿರಾಮ ಆಯಾಮಗಳಿಗೆ ಬಳಕೆ ಯಾಗುತ್ತಿರುವದು ಈ ಸಮಾಜದ ದುರಂತವೇ ಸರಿ..!