ಸೋಮವಾರಪೇಟೆ, ನ. 8: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿಯಿಂದ ಭತ್ತ ಮತ್ತು ಕಾಫಿ ಕೃಷಿ ನಷ್ಟಕ್ಕೀಡಾಗುತ್ತಿದೆ ಎಂದು ಸ್ಥಳೀಯ ಕೆಲ ಕೃಷಿಕರು ಆರೋಪಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ನೂರಾರು ಬೀಡಾಡಿ ಜಾನುವಾರುಗಳು ಸುತ್ತಲಿನ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ಬೆಳೆದಿರುವ ಬೆಳೆಗಳನ್ನು ತಿಂದು, ತುಳಿದು ನಾಶಮಾಡುತ್ತಿವೆ ಎಂದು ಬೆಳೆಗಾರ ಎಂ.ಟಿ. ಸಂಜಯ್ ಆರೋಪಿಸಿದ್ದಾರೆ.
ಜಾನುವಾರುಗಳನ್ನು ಮನೆಯಲ್ಲಿಯೇ ಕಟ್ಟಿ ಸಾಕಲು ಮಾಲೀಕರು ಮುಂದಾಗಬೇಕು. ತಪ್ಪಿದಲ್ಲಿ ಅವುಗಳನ್ನು ಹಿಡಿದು ಗೋ ಶಾಲೆಗೆ ಸಾಗಿಸಲು ಕ್ರಮಕೈಗೊಳ್ಳಬೇಕು ಎಂದು ಐಗೂರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದೆವು. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭತ್ತದ ಗದ್ದೆಗಳಲ್ಲಿ ಫಸಲು ಕಟಾವಿಗೆ ಬರುತ್ತಿದೆ. ಆದರೆ, ರಾತ್ರಿಯಾದೊಡನೆ ಅಕ್ಕಪಕ್ಕದ ಕಾಡಿನಲ್ಲಿ ವಾಸ್ತವ್ಯವಿರುವ ಬೀಡಾಡಿ ಜಾನುವಾರುಗಳು ಗದ್ದೆಗೆ ಬಂದು ಬೆಳೆ ನಷ್ಟ ಮಾಡುತ್ತಿವೆ. ಇದರಿಂದಾಗಿ ಹೆಚ್ಚಿನ ಬೆಳೆ ನಷ್ಟವಾಗುತ್ತಿದೆ. ಪಂಚಾಯಿತಿಯವರು ಇದರ ನಿಯಂತ್ರಣಕ್ಕೆ ಕ್ರಮಕೈಗೊಳ್ಳದಿದ್ದಲ್ಲಿ ಎಲ್ಲ ರೈತರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕೃಷಿಕಾರದ ಕೆ.ಪಿ. ದಿನೇಶ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಕಾಫಿ ತೋಟದಲ್ಲಿ ಗೂಳಿಗಳು ದಾಂಧಲೆ ನಡೆಸಿದ್ದರಿಂದ ನೂರಾರು ಕಾಫಿ ಗಿಡಗಳು ಹಾನಿಯಾಗಿವೆ. ಇದರೊಂದಿಗೆ ಕಾಫಿ ಫಸಲನ್ನು ತಿಂದು ನಷ್ಟಪಡಿಸುತ್ತಿವೆ ಎಂದು ಐಗೂರು ಗ್ರಾಮದ ಕಾಫಿ ಬೆಳೆಗಾರರಾದ ಉಷಾ ದೂರಿದ್ದಾರೆ.
ಐಗೂರು ಗ್ರಾಮ ಪಂಚಾಯಿತಿಯವರು ಜಾನುವಾರುಗಳ ಹಾವಳಿಗೆ ತಕ್ಷಣ ತಡೆಯೊಡ್ಡಬೇಕೆಂದು ಕಾಫಿ ಬೆಳೆಗಾರರಾದ ಐಯ್ಯಪ್ಪ, ಡಿ.ಕೆ. ಶಿವಪ್ಪ, ಎಂ.ಎಚ್. ತ್ರಿವರ್ಣ, ಡಿ.ಎಚ್. ಚಂಗಪ್ಪ, ಎಂ.ಪಿ. ಮೇಘನ, ಡಿ.ಎಂ. ಪೂವಯ್ಯ ಸೇರಿದಂತೆ ಇತರರು ಎಚ್ಚರಿಸಿದ್ದಾರೆ.