ಮಡಿಕೇರಿ, ನ.8 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ತಾ.15 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಅಮ್ಮಟ್ಟಂಡ ಡಾ.ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಸ್ಥಾಪಕಾಧ್ಯಕ್ಷರೂ ಆದ ಕೊಂಗಂಡ ಎಸ್.ದೇವಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರಾಶುಂಪಾಲ ಡಾ.ಜಗತ್ ತಿಮ್ಮಯ್ಯ ಭಾಗವಹಿಸಲಿದ್ದು, ತನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಇದೀಗ ಸಂಘದ ನಿರ್ದೇಶಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೋವಿಡ್ ಬಗ್ಗೆ ಆನ್‍ಲೈನ್‍ನಲ್ಲಿ ಕವನ ಬರೆಯುವ ಕಾರ್ಯಕ್ರಮ ಏರ್ಪಡಿಸಿದ್ದು, ತಾ.15 ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ ಪ್ರಾರಂಭವಾಗಿ 25 ವರ್ಷ ತುಂಬಿದ ಪ್ರಯುಕ್ತ ಸ್ಮರಣಾ ಸಂಚಿಕೆ ತರಲು ನಿರ್ಧರಿಸಲಾಗಿದ್ದು, ಇದರ ಸಂಪಾದಕರಾಗಿ ಮೊಣ್ಣಂಡ ಶೋಭಾ ಸುಬ್ಬಯ್ಯ ಹಾಗೂ ಸದಸ್ಯರಾಗಿ ಬಿದ್ದಂಡ ಕಾವೇರಿ ನಂಜಪ್ಪ, ಬಲ್ಯಂಡ ವಿಜು ನಂಜಪ್ಪ, ಕಿಶೋರ್ ರೈ ಕತ್ತಲೆಕಾಡು, ವಿಘ್ನೇಶ್ ಭೂತನಕಾಡು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಹಳೇ ವಿದ್ಯಾರ್ಥಿಗಳಿಂದ ಅವರ ಕಾಲೇಜು ದಿನಗಳಿಗೆ ಸಂಬಂಧಪಟ್ಟ ಲೇಖನ, ಕವನ ಕಥೆ, ಕಾರ್‍ಟೂನ್, ಚುಟುಕು, ಹನಿಗವನ ಹಾಗೂ ಕಾಲೇಜಿಗೆ ಸಂಬಂಧಿಸಿದ ಹಳೇ ಫೋಟೋಗಳನ್ನು ಆಹ್ವಾನಿಸಿದ್ದು, ಕಥೆಗಳು 1,500 ಪದ ಮೀರದಂತೆ, ಕವನಗಳು, 16 ಪಂಕ್ತಿ, ನ್ಯಾನೋ ಕಥೆ 100 ಪದ ಮೀರದಂತೆ ಹಾಗೂ ಪ್ರಬಂಧಗಳಲ್ಲಿ ಅನಿಸಿಕೆ, ಸಲಹೆ, ರಾಜಕೀಯ ಹೊರತಾಗಿ ಕಳಹಿಸುವಂತೆ ತಿಳಿಸಿದರು.

ಎಲ್ಲಾ ವಿಷಯಗಳು ಹಾರ್ಡ್‍ಕಾಪಿ ಹಾಗೂ ಸಾಫ್ಟ್ ಕಾಪಿ ಮಾಡಿ ಎಂ. ಶೋಭಸುಬ್ಬಯ್ಯ, ಅಶೋಕ ಭವನ, ಹೊಸ ಬಡಾವಣೆ, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಸಾಫ್ಟ್ ಕಾಪಿ ಯನ್ನು mಚಿರಿoಡಿಟಿಚಿಟಿರಿಚಿಠಿಠಿಚಿ2 @gmಚಿiಟ.ಛಿom, ಞಚಿveಡಿಥಿಚಿiಥಿಚಿಟಿಟಿಚಿ@gmಚಿiಟ.ಛಿomಗೆ ಜನವರಿ 31ರೊಳಗೆ ಕಳುಹಿಸಬಹು ದಾಗಿದೆ. ಬರಹಗಾರರು ತಮ್ಮ ಭಾವಚಿತ್ರವನ್ನು ಲಗತ್ತಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ 9448366715 ನ್ನು ಸಂಪರ್ಕಿಸುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಗೌರವ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ನಿರ್ದೇಶಕ ಬಲ್ಯಂಡ ವಿಜು ನಂಜಪ್ಪ ಉಪಸ್ಥಿತರಿದ್ದರು.