ಕೂಡಿಗೆ, ನ. 8: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಆವರಣದಲ್ಲಿ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು .

ಹೇಮಂತ್ ಕುಮಾರ್ ಮಾತನಾಡಿ, ಸಂಘವು ರೈತರಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುವುದರ ಮೂಲಕ ವಾರ್ಷಿಕವಾಗಿ ರೂ. 22 ಲಕ್ಷದ 96 ಸಾವಿರ ಲಾಭ ಗಳಿಸಿದೆ. ಅಲ್ಲದೆ ಮುಂದಿನ ಹೊಸ ಯೋಜನೆಯಂತೆ ಸದಸ್ಯರ ಸಹಕಾರದೊಂದಿಗೆ ಸೀಗೆಹೊಸೂರು ಗ್ರಾಮದಲ್ಲಿ 2 ಎಕರೆ ಒಣ ಭೂಮಿ ಜಾಗವನ್ನು ಖರೀದಿಸಲಾಗಿದೆ. ಆ ಜಾಗದಲ್ಲಿ 1 ಕೋಟಿ, 10 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಗೋದಾಮು ಮತ್ತು ರೈತರಿಗೆ ಅನುಕೂಲವಾಗುವಂತೆ ಕಣವನ್ನು ನಿರ್ಮಾಣ ಮಾಡಲಾಗುವುದು. ಈಗಾಗಲೇ ಇದರ ನೀಲಿ ನಕ್ಷೆ ತಯಾರಿಸಿ ನಬಾರ್ಡ್ ಸಂಸ್ಥೆಗೆ ಕಳುಹಿಸಲಾಗಿದೆ. ಹಣ ಬಿಡುಗಡೆ ಆದ ತಕ್ಷಣ ಗೋದಾಮು ಮತ್ತು ಈಗಿರುವ ಸಹಕಾರ ಭವನವನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ರೈತರ ಸಹಕಾರ ಮುಖ್ಯ ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ರೈತ ಸದಸ್ಯರು ಕೃಷಿ ಸಾಲದ ಬಗ್ಗೆ, ಜಮೀನು ಸಾಲದ ಬಗ್ಗೆ, ಗೊಬ್ಬರ ಮತ್ತು ವ್ಯಾಪಾರ ಅಭಿವೃದ್ಧಿ ಸಾಲದ ಬಗ್ಗೆ ಚರ್ಚಿಸಿದರು.

ಸಂಘದ ಉಪಾಧ್ಯಕ್ಷ ಟಿ.ಪಿ. ಹಮೀದ್, ನಿರ್ದೇಶಕರುಗಳಾದ ಕೆ.ಕೆ. ಭೋಗಪ್ಪ, ತಮ್ಮಣ್ಣೆಗೌಡ, ಕೆ.ಟಿ. ಅರುಣ್‍ಕುಮಾರ್, ಎಸ್.ಎನ್. ರಾಜಾರಾವ್, ಟಿ.ಕೆ. ವಿಶ್ವನಾಥ, ಹೆಚ್.ಆರ್. ಪಾರ್ವತಮ್ಮ, ಕೆ.ಎನ್. ಲಕ್ಷಣರಾಜ ಅರಸ್, ಕೃಷ್ಣೆಗೌಡ, ವಿ. ಬಸಪ್ಪ, ರಮೇಶ, ಕೆ.ಕೆ. ಪವಿತ್ರ, ಕುಶಾಲನಗರ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ತುಂಗರಾಜು, ಸಂಘದ ಮೇಲ್ವಿಚಾರಕರಾದ ಎನ್.ಕೆ. ಅಜೀವ್, ನವೀನ್ ಕುಮಾರ್ ಸೇರಿದಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನ ಇತರರು ಹಾಜರಿದ್ದರು.

ಇದೆ ಸಂದರ್ಭ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ಸಂಘದ ರೈತ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು. ಕೆ.ಟಿ. ಅರುಣ್ ಕುಮಾರ್ ಸ್ವಾಗತಿಸಿ, ರಾಜಾರಾವ್ ವಂದಿಸಿದರು.