ಸುಂಟಿಕೊಪ್ಪ, ನ. 6: ಇಲ್ಲಿಗೆ ಸಮೀಪದ 7ನೇ ಹೊಸಕೋಟೆ ಸುತ್ತಮುತ್ತಲಿನಲ್ಲಿ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಬೀಡು ಬಿಟ್ಟ ನಾಡು ದನಗಳನ್ನು ದನಗಳ್ಳರು ಸಮಯ ಸಾದಿಸಿ ರಾಷ್ಟ್ರೀಯ ಹೆದ್ದಾರಿ ಯಿಂದಲೇ ಪಿಕ್‍ಅಪ್ ವಾಹನದಲ್ಲಿ ರಾಜಾರೋಷವಾಗಿ ತುಂಬಿ ಕದ್ದೊಯ್ಯುವ ದೃಶ್ಯ ಹೆದ್ದಾರಿ ಬದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಗ್ರಾಮ ಪಂಚಾಯಿತಿಯಿಂದ ಜಾನುವಾರು ಗಳ ಮಾಲೀಕರಿಗೆ ದನಗಳನ್ನು ರಸ್ತೆಗೆ ಬಿಡದಂತೆ ನೋಟೀಸು ಜಾರಿ ಮಾಡಿದ್ದು ಮಾಲೀಕರ ನಿರ್ಲಕ್ಷ್ಯದಿಂದ ಎಷ್ಟೋ ಬಾರಿ ವಾಹನಗಳಿಗೆ ಸಿಲುಕಿ ಸಾವಿಗೀಡಾಗಿದೆ. ಬೈಕು ಸವಾರರು ರಾತ್ರಿ ವೇಳೆ ಜಾನುವಾರುಗಳಿಗೆ ಡಿಕ್ಕಿಯಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಇದರ ಪ್ರಯೋಜನ ಪಡೆದ ದನಕಳ್ಳರು ನಡು ರಾತ್ರಿಯಲ್ಲಿ ಪಿಕ್‍ಅಪ್ ವಾಹನ ತಂದು ರಾತ್ರಿ ಮಲಗಿದ್ದ ಜಾನುವಾರುಗಳನ್ನು ತುಂಬುತ್ತಿರುವ ದೃಶ್ಯ ರಾತ್ರಿ 1 ಗಂಟೆ ಸಮಯದಲ್ಲಿ ಹೆದ್ದಾರಿ ಬದಿಯ ಕೂರ್ಗ್ ಸ್ಪೈಸಸ್ ಅಂಗಡಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಕೂಡಲೇ ದನ ಕಳ್ಳರನ್ನು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.