ಶನಿವಾರಸಂತೆ, ನ. 6: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಮಂಗಳವಾರ ಕೊಡ್ಲಿಪೇಟೆಗೆ ಹೋಗುತ್ತಿದ್ದ ಗೂಡ್ಸ್ ವಾಹನ (ಕೆಎ-21 ಎ-3372)ಕ್ಕೆ ಕೊಡ್ಲಿಪೇಟೆ ಕಡೆಯಿಂದ ಬಂದ ಕಾರು (ಕೆಎ-41 ಎಂ-1583) ಡಿಕ್ಕಿ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ ಬಿ.ಎಲ್. ವಿನೋದ್ ಕುಮಾರ್ ರೈ ತನ್ನ ಗೂಡ್ಸ್ ವಾಹನದಲ್ಲಿ ವಾರಕ್ಕೆ 2 ದಿನ ಹಾರ್ಡ್ವೇರ್ ಸಾಮಗ್ರಿಗಳನ್ನು ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಅಂಗಡಿಗಳಿಗೆ ಸಾಗಾಟ ಮಾಡುತ್ತಿದ್ದು, ಮಂಗಳವಾರ ಸಂಜೆ ಕೊಡ್ಲಿಪೇಟೆಗೆ ಹೋಗುತ್ತಿರುವಾಗ ಬ್ಯಾಡಗೊಟ್ಟ ಬಳಿ ಕೊಡ್ಲಿಪೇಟೆ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಇ. ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಠಾಣೆಯ ಹೆಡ್ಕಾನ್ಸ್ಟೇಬಲ್ ಸಿದ್ದಯ್ಯ ಕಲಂ 279 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.