ಗೋಣಿಕೊಪ್ಪ ವರದಿ, ನ. 6: ಹೊಸೂರು ಗ್ರಾಮದ ಚೆಪ್ಪುಡೀರ ಶುಭಾಶ್ ಎಂಬವರ ಕಾಫಿ ತೋಟದಲ್ಲಿ ಗುಂಡೇಟಿಗೆ ಸಾವಿಗೀಡಾಗಿರುವ ಹಸುವಿನ ಕಳೇಬರ ಪತ್ತೆಯಾಗಿದ್ದು, ಮಾಂಸಕ್ಕಾಗಿ ಕೊಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರ ಮನವಿಯಂತೆ ಸಿದ್ದಾಪುರ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ. ಹಸುವಿನ ವಾರಸುದಾರರು ಯಾರು ಎಂದು ತಿಳಿದುಬಂದಿಲ್ಲ.
ಶುಕ್ರವಾರ ಬೆಳಿಗ್ಗೆ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಳೇಬರ ಪತ್ತೆಯಾಗಿದೆ. ದೇಹದಲ್ಲಿ ಗುಂಡು ಹೊಡೆದಿರುವ ಗುರುತುಗಳು ಕೂಡ ಪತ್ತೆಯಾಗಿದೆ. 3 ದಿನಗಳ ಹಿಂದೆ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ನಂತರ ಸಿದ್ದಾಪುರ ಪೊಲೀಸರಿಗೆ ದೂರು ನೀಡಲಾಯಿತು. ಇದರಂತೆ ಶವ ಪರೀಕ್ಷೆ ನಡೆಸಿ ಕ್ರಮಕ್ಕೆ ಮುಂದಾಗಿದೆ.
ಒತ್ತಾಯ : ಹಲವು ವರ್ಷಗಳ ಹಿಂದೆ ಈ ಭಾಗದಲ್ಲಿ ಮಾಂಸಕ್ಕಾಗಿ ಜಾನುವಾರುಗಳನ್ನು ಹತ್ಯೆ ಮಾಡಿರುವ ಘಟನೆ ಸಾಕಷ್ಟು ನಡೆದಿದೆ. ಗ್ರಾಮಸ್ಥರ ಒಗ್ಗಟ್ಟಿನಿಂದ ಪ್ರಕಣಗಳು ಕಡಿಮೆಯಾಗಿತ್ತು. ಇಂತಹ ಕಿಡಿಗೇಡಿಗಳ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡ ಕೊಲ್ಲೀರ ಗೋಪಿ ಚಿಣ್ಣಪ್ಪ ಒತ್ತಾಯಿಸಿದ್ದಾರೆ.