ಇಂದು ಉಪಗ್ರಹ ಇಒಎಸ್-01 ಉಡಾವಣೆ
ಬೆಂಗಳೂರು, ನ. 6: ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್-01ರ ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೇಳಿದೆ. ಕೊರೊನಾ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಇಸ್ರೋದ ಅಂತರಿಕ್ಷ ಕಾರ್ಯಕ್ರಮಗಳು ಸ್ಥಗಿತವಾಗಿದ್ದು, ಇದೀಗ ಮತ್ತೆ ಚಾಲನೆ ಸಿಗಲಿದೆ. ಶನಿವಾರ ಮಧ್ಯಾಹ್ನ 3:02 ಕ್ಕೆ ಪಿಎಸ್‍ಎಲ್ವಿ-ಸಿ49 ವಾಹನದೊಡನೆ ಇಒಎಸ್ -01, ಇತರ ಒಂಭತ್ತು ಅಂತರರಾಷ್ಟ್ರೀಯ ಗ್ರಾಹಕರ ಉಪಗ್ರಹಗಳು ಸೇರಿ ಹತ್ತು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಸೇರಿಸಲಿದೆ. ಪಿಎಸ್‍ಎಲ್‍ವಿ-ಸಿ 49 / ಇಒಎಸ್ -01 ಮಿಷನ್ ಉಡಾವಣೆಯ ಕ್ಷಣಗಣನೆ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‍ಡಿಎಸ್‍ಸಿ)ದಲ್ಲಿ ಶುಕ್ರವಾರ ಮಧ್ಯಾಹ್ನ 1:02 ಗಂಟೆ(ಐಎಸ್‍ಟಿ)ಯಿಂದ ಪ್ರಾರಂಭವಾಯಿತು ಎಂದು ಇಸ್ರೋ ತಿಳಿಸಿದೆ.
ಜನೌಷಧ ಕೇಂದ್ರಗಳಲ್ಲಿ ಆಯುರ್ವೇದಿಕ್ ಔಷಧ
ಬೆಂಗಳೂರು, ನ. 6: ಜನೌಷಧ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಆಯುರ್ವೇದಿಕ್ ಔಷಧ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ಕೊಡುವ ಕೆಲಸವನ್ನು ಇಂದು ಕೇಂದ್ರ ಸರ್ಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ. 10 ರಿಂದ ಶೇ. 90 ರವರೆಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ ಎಂದರು.
ಸರಳ ದೀಪಾವಳಿ ಆಚರಿಸಲು ಮನವಿ
ಬೆಂಗಳೂರು, ನ. 6: ಈ ಬಾರಿ ಸರಳ ದೀಪಾವಳಿ ಆಚರಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಸಾಯನಿಕಯುಕ್ತ ಪಟಾಕಿ ನಿಷೇಧಿಸಿ ಈ ಬಾರಿ ಸರಳ ದೀಪಾವಳಿ ಮಾಡಬೇಕು. ಈ ವರ್ಷ ಯಾರೂ ಪಟಾಕಿ ಸಿಡಿಸಬಾರದೆಂದು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಪಟಾಕಿ ನಿಷೇಧ ಮಾಡಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆಯ ತಾಂತ್ರಿಕ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯ ಹಿನ್ನೆಲೆ ಪಟಾಕಿ ನಿಷೇಧಿಸಲಾಗಿದೆ ಎಂದರು. ಕದ್ದುಮುಚ್ಚಿ ಪಟಾಕಿ ಸಿಡಿಸುವವರ ಮೇಲೂ ನಿಗಾವಹಿಸಲಾಗುವುದು. ಕದ್ದುಮುಚ್ಚಿ ಪಟಾಕಿ ಸಿಡಿಸುವುದನ್ನು ತಡೆಯಲು ನಾಳೆ ಚರ್ಚಿಸಿ ನಿಯಮ ರೂಪಿಸಲಾಗುವುದು. ಪಟಾಕಿ ನಿಷೇಧಕ್ಕೆ ಜನರು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು. ಉಪಚುನಾವಣೆ ನಡೆದ ಎರಡು ಕ್ಷೇತ್ರದಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕು ಅಂತ ತಜ್ಞರ ಸಮಿತಿ ವರದಿ ನೀಡಿದೆ. ಅದೇ ರೀತಿ ಗ್ರಾಮ ಪಂಚಾಯಿತಿ ಚುನಾವಣೆ ಸಹ ಮುಂದೂಡಲು ವರದಿ ನೀಡಿದ್ದಾರೆ.
ಅರ್ನಬ್ ಪ್ರಕರಣ : ಸುಪ್ರೀಂ ನೋಟೀಸ್
ನವದೆಹಲಿ, ನ. 6: ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಬರೆದ ಪತ್ರದ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿಯವರಿಗೆ ನೋಟೀಸ್ ಜಾರಿ ಮಾಡಿದೆ. ಮಹಾರಾಷ್ಟ್ರ ವಿಧಾನಸಭೆಯಿಂದ ಹಕ್ಕುಚ್ಯುತಿ ನೋಟೀಸ್ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಗೋಸ್ವಾಮಿಗೆ ರಿಲೀಫ್ ಕೊಟ್ಟಿದೆ. ಈ ಪತ್ರ ಬರೆದವರ ಬಗ್ಗೆ ನಮಗೆ ಗಂಭೀರ ಪ್ರಶ್ನೆ ಇದೆ ಮತ್ತು ಇದನ್ನು ಕಡೆಗಣಿಸುವುದು ನಮಗೆ ಅಸಾಧ್ಯವಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣದ ಮಾಧ್ಯಮ ಚರ್ಚೆಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಗೋಸ್ವಾಮಿಗೆ ಮಹಾ ಸರ್ಕಾರ ನೋಟೀಸ್ ನೀಡಿತ್ತು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ಮುಂಬೈನ ಉಪನಗರ ಬಾಂದ್ರಾದಲ್ಲಿರುವ ತನ್ನ ಅಪಾರ್ಟ್‍ಮೆಂಟ್‍ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.
ಚಿನ್ನದ ಬೆಲೆಯಲ್ಲಿ ರೂ. 791 ಏರಿಕೆ
ನವದೆಹಲಿ, ನ. 6: ಹಬ್ಬದ ಋತು ಪ್ರಾರಂಭವಾಗಿರುವ ಬೆನ್ನಲ್ಲೇ ಶುಕ್ರವಾರ ಚಿನ್ನದ ಬೆಲೆಯಲ್ಲಿ ರೂ. 791 ಏರಿಕೆ ಕಂಡು ಬಂದಿದೆ ಎಂದು ಹೆಚ್‍ಡಿಎಫ್‍ಸಿ ಸೆಕ್ಯುರಿಟೀಸ್ ಹೇಳಿದೆ. ಈ ಬೆಲೆ ಏರಿಕೆಯಿಂದ ಹತ್ತು ಗ್ರಾಂ ಚಿನ್ನದ ಬೆಲೆ ರೂ. 51,717 ಗೆ ಏರಿಕೆಯಾಗಿದೆ. ಕಳೆದ ವಹಿವಾಟಿನಲ್ಲಿ ಇದು 10 ಗ್ರಾಂ.ಗೆ ರೂ. 50,926 ಇತ್ತು. ಚಿನ್ನದ ಬೆಲೆ ಏರಿಕೆಯೊಂದಿಗೆ ಬೆಳ್ಳಿ ದರ ಸಹ ಏರಿಕೆಯಾಗಿದ್ದು ಕೆ.ಜಿ.ಗೆ ರೂ. 2,147 ಏರಿಕೆ ದಾಖಲಾಗಿದೆ. ಇದರಿಂದಾಗಿ ಹಿಂದಿನ ರೂ. 62,431 ಗಳಿಂದ ಕೆ.ಜಿ. ಬೆಳ್ಳಿ ಬೆಲೆ ರೂ. 64,578 ಗೆ ಜಿಗಿತ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನ ಔನ್ಸ್‍ಗೆ 1,950 ಡಾಲರ್ ಬೆಳ್ಳಿ ಔನ್ಸ್‍ಗೆ 25.44 ಡಾಲರ್ ಬೆಲೆ ದಾಖಲಿಸಿದೆ. ಹೆಚ್‍ಡಿಎಫ್‍ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಕಮಾಡಿಟೀಸ್) ತಪನ್ ಪಟೇಲ್ ಮಾತನಾಡಿ, ಹೆಚ್ಚಿನ ಉತ್ತೇಜಕ ಪ್ಯಾಕೇಜ್ ನಿರೀಕ್ಷೆಯ ಮೇರೆಗೆ ಚಿನ್ನದ ಬೆಲೆ ಏರಿಕೆಯಾಗಿದೆ ಎಂದಿದ್ದಾರೆ.
ಜ್ಞಾನೇಂದ್ರೊ ಹಾಕಿ ಇಂಡಿಯಾದ ಅಧ್ಯಕ್ಷರು
ನವದೆಹಲಿ, ನ. 6: ಮಣಿಪುರದ ಜ್ಞಾನೇಂದ್ರೊ ನಿಂಗೊಮ್ಬಾಮ್ ಹಾಕಿ ಇಂಡಿಯಾ (ಹೆಚ್‍ಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮೊಹಮ್ಮದ್ ಮುಷ್ತಾಕ್ ಅಹ್ಮದ್ ಅವರಿಂದ ಅಧಿಕಾರ ವಹಿಸಿಕೊಂಡರು. ಹಾಕಿ ಇಂಡಿಯಾದ ಕಾಂಗ್ರೆಸ್ ಮತ್ತು ಚುನಾವಣೆಗಳಲ್ಲಿ ಹಿರಿಯ ಉಪಾಧ್ಯಕ್ಷ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದ ನಂತರ ಅಹ್ಮದ್ ಫೆಡರೇಶನ್‍ನಲ್ಲಿ ಉಳಿದಿದ್ದಾರೆ. ಅಹ್ಮದ್ ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಜುಲೈನಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಆಯಾ ರಾಜ್ಯ ಸರ್ಕಾರಗಳು ವಿಧಿಸಿರುವ ನಿರ್ಬಂಧಗಳಿಂದಾಗಿ ಪ್ರಯಾಣ ಸಾಧ್ಯವಾಗದ ಹಿನ್ನೆಲೆ ಸದಸ್ಯ ಘಟಕಗಳಿಗೆ ವೀಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯದ ಮೂಲಕ ಸಭೆಗೆ ಪ್ರವೇಶ ಕಲ್ಪಿಸಲಾಗಿತ್ತು. ಈ ಸಮಯ ಅವಿರೋಧವಾಗಿ ಆಯ್ಕೆಯಾದ ಜ್ಞಾನೇಂದ್ರೊ ಈಶಾನ್ಯ ರಾಜ್ಯದಿಂದ ಈ ಹುದ್ದೆಗೆ ಆಯ್ಕೆಯಾದ ಮೊದಲಿಗರೆನಿಸಿದ್ದಾರೆ. ಎರಡು ವರ್ಷಗಳ ಅವಧಿಗೆ ಆಯ್ಕೆಯಾದ ಜ್ಞಾನೇಂದ್ರೊ ನಿಂಗೊಮ್ಬಾಮ್ 2009-2014ರ ನಡುವೆ ಮಣಿಪುರ ಹಾಕಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ಹಾಕಿ ಜತೆಗೆ ಸಂಬಂಧ ಹೊಂದಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ತಳಮಟ್ಟದಲ್ಲಿ ಹಾಕಿ ಅಭಿವೃದ್ಧಿಪಡಿಸುವಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಭೂ ಕುಸಿತದಿಂದ 50 ಸಾವು
ಹೊಂಡುರಾಸ್, ನ. 6: ಮಧ್ಯ ಅಮೇರಿಕಾದ ಗ್ವಾಟೆಮಾಲಾದಲ್ಲಿ ಭಾರೀ ಮಳೆಯಿಂದ ವಿವಿಧೆಡೆ ಸಂಭವಿಸಿದ ಭೂ ಕುಸಿತದಿಂದಾಗಿ ಕನಿಷ್ಟ 50 ಮಂದಿ ಸಾವನ್ನಪ್ಪಿ, ಹಲವರು ನಾಪತ್ತೆಯಾಗಿದ್ದಾರೆ. ಮಧ್ಯ ಅಮೇರಿಕಾದಲ್ಲಿ ಎಟಾ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿದ್ದು, ನೀರಿನ ಪ್ರವಾಹ ಮತ್ತು ಭೂಕುಸಿತದಿಂದಾಗಿ ಕನಿಷ್ಟ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿವಿಧೆಡೆ ಗುಡ್ಡ ಕುಸಿತಗಳು ಸಂಭವಿಸಿದ್ದು, ಇಲ್ಲಿನ ಸ್ಯಾನ್ ಕ್ರಿಸ್ಟೊಬಾಲ್ ವೆರಪಾಜ್ ನಗರದಲ್ಲೂ ಭಾರೀ ಭೂ ಕುಸಿತವಾಗಿದೆ. ಮನೆಗಳು ಗುಡ್ಡದಡಿ ಸಿಲುಕಿದ್ದು, 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಂತೆಯೇ ಮಧ್ಯ ಅಮೇರಿಕಾದಲ್ಲಿ ಮಳೆಯಿಂದಾಗಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಮಧ್ಯ ಗ್ವಾಟೆಮಾಲಾದಲ್ಲಿ ಗುಡ್ಡ ಕುಸಿತದಿಂದ 25 ಮನೆಗಳು ನೆಲಸಮವಾಗಿದ್ದು, ಹಲವಾರು ಮಂದಿ ಅವಶೇಷದಡಿ ಸಿಲುಕಿದ್ದಾರೆ ಎಂದು ಅಧ್ಯಕ್ಷ ಅಲ್‍ಜಂಡ್ರೊ ಗಿಯಾಮಟೈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.