ಕುಶಾಲನಗರ, ನ. 5: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಿಯಮಬಾಹಿರ ಹಣಕಾಸು ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಎಚ್.ಎಂ.ಶೈಲೇಂದ್ರಕುಮಾರ್ ತಿಳಿಸಿದ್ದಾರೆ. ಶಕ್ತಿಯಲ್ಲಿ ಪ್ರಕಟಗೊಂಡ ವರದಿಗೆ ತಕ್ಷಣ ಸ್ಪಂದಿಸಿರುವ ಅವರು ಪಟ್ಟಣದಲ್ಲಿ ನಡೆಯುತ್ತಿರುವ ಹಣಕಾಸು ಸಂಸ್ಥೆಗಳ ಸಂಪೂರ್ಣ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸ ಲಾಗುತ್ತಿದೆ. ಮನಿ ಡಬ್ಲಿಂಗ್ ಮತ್ತಿತರ ಆಮಿಷ ಒಡ್ಡಿ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಗುಡ್ಡೆಹೊಸೂರು ಬಳಿ ಕಾರ್ಯನಿರ್ವಹಿಸುತ್ತಿದ್ದ ಹಣಕಾಸು ಸಂಸ್ಥೆ ಪ್ರಮುಖರನ್ನು ಕರೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಅನುಮತಿ ಪತ್ರವಿಲ್ಲದೆ ಯಾವುದೇ ವ್ಯವಹಾರ ನಡೆಸದಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕೆಲವು ಮೈಕ್ರೋ ಫೈನಾನ್ಸ್‍ಗಳು ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಸಾಮಾನ್ಯ ಜನರನ್ನು ವಂಚಿಸುತ್ತಿರುವ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಶೈಲೇಂದ್ರಕುಮಾರ್, ಹಣಕಾಸು ಸಂಸ್ಥೆಯ ಹೆಸರಿನಲ್ಲಿ ಹೂಡಿಕೆ ಮಾಡುತ್ತಿರುವ ಸಂಸ್ಥೆಗಳ ಬಗ್ಗೆ ಕೂಡಲೇ ಇಲಾಖೆಯ ಗಮನಕ್ಕೆ ತರುವಂತೆ ಶಕ್ತಿ ಮೂಲಕ ಕೋರಿದ್ದಾರೆ.