ಮಡಿಕೇರಿ, ನ. 5: ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಅಧಿಕಾರಿ - ಸಿಬ್ಬಂದಿಗಳು ಕಡ್ಡಾಯವಾಗಿ ಇಲಾಖೆಯಿಂದ ಪಡೆದ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸಿ ಪ್ರದರ್ಶಿಸುವ ಮೂಲಕ ಕರ್ತವ್ಯ ನಿರ್ವಹಿಸುವಂತೆ ಸರಕಾರ ಆದೇಶಿಸಿದೆ. ಈ ಬಗ್ಗೆ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಆಡಳಿತ ಸುಧಾರಣೆ - ತಪಾಸಣೆ)ಯ ಅಧೀನ ಕಾರ್ಯದರ್ಶಿ ಹೆಚ್.ಸಿ. ಹರ್ಷರಾಣಿ ಅವರು ಆದೇಶ ಹೊರಡಿಸಿದ್ದಾರೆ.ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಅಧಿಕಾರಿಗಳು ತಾವು ಕುಳಿತು ಕರ್ತವ್ಯ ನಿರ್ವಹಿಸುವ ಮೇಜಿನ ಮೇಲೆ ಹೆಸರು ಮತ್ತು ತಮ್ಮ ಹುದ್ದೆಯನ್ನು ಸೂಚಿಸುವ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ಮೂಲಕ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆಯನ್ನು ತರಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಸರಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ತಮ್ಮ ಅಧೀನ ಇಲಾಖೆಗಳಿಗೆ ಹಾಗೂ ಸರಕಾರದ ಅಧೀನದ ನಿಗಮ - ಮಂಡಳಿಗಳ ಅಧಿಕಾರಿ - ಸಿಬ್ಬಂದಿಗಳಿಗೆ ಈ ಆದೇಶವನ್ನು ಪಾಲಿಸಲು ಸೂಕ್ತ ನಿರ್ದೇಶನವನ್ನು ನೀಡುವಂತೆಯೂ ಹರ್ಷರಾಣಿ ಅವರು ತಮ್ಮ ಆದೇಶದಲ್ಲಿ ಸೂಚನೆ ನೀಡಿ ತಾ. 3 ರಂದು ಪ್ರಕಟಣೆ ಹೊರಡಿಸಿದ್ದಾರೆ.