ವೀರಾಜಪೇಟೆ, ನ. 5: ಓದಿದ್ದು ಮೂರನೇ ಕ್ಲಾಸ್‍ವರೆಗೆ. ಮನೆಯಲ್ಲಿ ಬಡತನ ಅಲ್ಲದಿದ್ದರೂ 17 ನೇ ವಯಸ್ಸಿಗೆ ಮನೆ ಬಿಟ್ಟು ಹೊರಟರು. 26ನೇ ವಯಸ್ಸಿಗೆ ಮದುವೆಯಾದರು. ಉದರ ನಿಮಿತ್ತÀ ಅಮ್ಮತ್ತಿ, ಕಾನೂರು, ಕೇರಳದ ವಯನಾಡ್‍ನಲ್ಲಿ ಅಲೆದಾಡಿ ಸಣ್ಣ ಪುಟ್ಟ ಕೆಲಸ ಮಾಡಿದರೂ ಕೊನೆಗೆ ಛಲಬಿಡದ ವಾಮನ ಚೆನ್ನಂಗೊಡಂಡ ಐಮದರ ಕೈ ಹಿಡಿಯಿತು ಹೈನುಗಾರಿಕೆ.
ವೀರಾಜಪೇಟೆ ಸಮೀಪ ಬೇಟೋಳಿ ಗುಂಡಿಗೆರೆಯ ಮೈದುನ್ ಕುಂಞ ಹಾಗೂ ಅಮೀನ ದಂಪತಿಯ ಒಟ್ಟು 11 (5 ಗಂಡು 6 ಹೆಣ್ಣು) ಮಕ್ಕಳಲ್ಲಿ ಕೊನೆಯವರಾಗಿ 1946 ರಲ್ಲಿ ಜನಿಸಿದ ಐಮದ್ ತಮ್ಮ 12 ವಯಸ್ಸಿಗೆ ತಾಯಿಯನ್ನು, 15 ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ಒಡಹುಟ್ಟಿದ ಅಣ್ಣ, ಅತ್ತಿಗೆಯಿದ್ದರೂ 17ನೇ ವಯಸ್ಸಿಗೆ ಹುಟ್ಟೂರು ತೊರೆದು ಅಲೆಮಾರಿಯಾದರು.
ಊರೂರು ಸುತ್ತಿ 1972 ರಲ್ಲಿ ಪೆರಂಬಾಡಿಯ ನಬೀಸ ಅವರನ್ನು ಮದುವೆಯಾಗಿ ವೀರಾಜಪೇಟೆ ಪಟ್ಟಣ ಸೇರಿದರು. ಮೊದಲಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ವೀರಾಜಪೇಟೆಯ ಇಂದಿನ ಸುಭಾಶ್ ನಗರದಲ್ಲಿ 1986ರಲ್ಲಿ ಕೇವಲ ರೂ. 5000 ರೂಪಾಯಿಗೆ 10 ಸೆಂಟು ಜಾಗ ಖರೀದಿಸಿ ಸಣ್ಣದೊಂದು ಮನೆ ನಿರ್ಮಿಸಿದರು. ಇಂದು ಅದರ ಸುತ್ತಮುತ್ತ ಇನ್ನೂ ಇಪ್ಪತು ಸೆಂಟು ಜಾಗ ಖರೀದಿಸಿ ದನದ ಕೊಟ್ಟಿಗೆ ನಿರ್ಮಿಸಿ 22 ವಿವಿಧ ತಳಿಯ ಹಸು ಸಾಕುತ್ತಿದ್ದಾರೆ.ತಾಯಿ ತೀರಿಕೊಂಡಾಗ ಮನೆಯಲ್ಲಿ 13 ಹಾಲು ಕರೆಯುವ ಹಸುಗಳು ಇದ್ದವು. ಮನೆ ಬಿಟ್ಟು ಬಂದ ಮೇಲೆ ಮಾಡುವುದೇನು? ಎಂದು ಯೋಚಿಸುವಾಗ ಕೈಹಿಡಿದದ್ದು ಹೈನುಗಾರಿಕೆ. ಹಸು ಸಾಕುವುದರಿಂದ ದರಿದ್ರ ಬರುವುದಿಲ್ಲ ಮತ್ತು ಪಟ್ಟಣಿ (ಉಪವಾಸ) ಬೀಳುವುದಿಲ್ಲ ಎಂದು ಪ್ರಶಂಸೆಯ ನಗೆ ಬೀರುತ್ತಾರೆ ಐಮದ್. ಮೊದಲಿಗೆ ಗಂಡ, ಹೆಂಡತಿ ಇಬ್ಬರಿಗೆ ಐದೈದು ಸಾವಿರ ಜನಾರ್ಧನ ಪೂಜಾರಿ ಅವರ ಸಾಲದ ಯೋಜನೆಯಿಂದ ಒಂದು ಹಸು ಖರೀದಿಸಿ ಬಂಡ ಧೈರ್ಯದೊಂದಿಗೆ ಆರಂಭಿಸಿದ್ದು, ಇಂದು 22 ದನ -ಕರುಗಳಿವೆ.
‘ನನ್ನ ದಿನಚರಿ ಬೆಳಿಗ್ಗೆ 4.50ಕ್ಕೆ ಶುರು ಆಗುತ್ತದೆ. ಪಶು ಆಹಾರ, ಗಂಜಿ ತಯಾರಿಸುವುದು. ಸೆಗಣಿ ತೆಗೆಯುವುದು, ಹಸಿ ಹುಲ್ಲು ಕತ್ತರಿಸಿ ತರುವುದು, ಹಸುಗಳನ್ನು ತೊಳೆಯುವುದು, ಮೇಯಿಸುವುದು ಹೀಗೆ ಸಾಗುತ್ತದೆ. ವೀರಾಜಪೇಟೆಯ ಪಶು ವೈದ್ಯಾಧಿಕಾರಿ ಡಾ.ಶಾಂತೇಶರ ಸಲಹೆಯಂತೆ ಹಸುಗಳ ದೇಹ ನಿರ್ವಹಣೆಗೆ ಖನಿಜ ಮಿಶ್ರಣ ಆಹಾರ ಎರಡು ಹೊತ್ತು ಕನಿಷ್ಟ ನೂರು ಗ್ರಾಂ ಕೊಡುವುದರಿಂದ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಬಹುದು. ಒಬ್ಬ ಹಾಲು ಹಿಂಡಲು ಬರುತ್ತಾನೆ.
ಯಂತ್ರದಿಂದ ಹಾಲು ಹಿಂಡುವುದಕ್ಕಿಂತ ಕೈಯಲ್ಲೇ ಸುಲಭ
ಮತ್ತು ಫಲದಾಯಕ. ಇಂದು 22 ರಾಸುಗಳಿದ್ದು, 8 ಹಸುಗಳಿಂದ 50 ಲೀಟರ್ ಹಾಲು ಸಿಗುತ್ತದೆ. ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಹೆಚ್ಚಾಗುತ್ತದೆ. ಹೊಸ ಟ್ರೆಂಡ್ನಂತೆ ದೇಸಿ ತಳಿಗಳ ಹಾಲಿಗೆ ಬೆಲೆ ಇದ್ದು ನಾನು, ಲೀಟರಿಗೆ 40 ರೂಪಾಯಿಯಂತೆ ಪೇಟೆಯ ಸುತ್ತಮುತ್ತ ಹಾಲು ಮಾರುತ್ತೇನೆ. ಉಳಿಕೆ ಹಾಲನ್ನು ಮೊಸರು ಮಾಡಿ ತುಪ್ಪ- ಬೆಣ್ಣೆ ಕಾಯಿಸಿ 600 ರೂಪಾಯಿ ಕೆ.ಜಿ.ಗೆ ಮಾರಾಟ ಮಾಡುತ್ತೇನೆ. ವಾರ್ಷಿಕ ಎರಡು ಲಕ್ಷದ ಸೆಗಣಿ ಮಾರುತ್ತೇನೆ’ ಎಂದು ಐಮದ್ ತಮ್ಮ ಉದ್ದಿಮೆ ಬಗ್ಗೆ ಹೇಳುತ್ತಾರೆ.
‘ನಾನು ಜಮ್ಮಾ ಕೊಡವ ಮಾಪಿಳೆ, ಹಸುಗಳಿಗೆ ಅಮ್ಮಣಿ, ಲಕ್ಷ್ಮೀ, ಕುಳ್ಳಿ, ಪಾರು, ಗೌರಿ, ಮೋಟಚಿ ಎಂದು ಹೆಸರಿಟ್ಟಿರುವೆ.
(ಮೊದಲ ಪುಟದಿಂದ) ಮೂಕಪ್ರಾಣಿಗಳಿಗೆ ಇರುವ ಪ್ರೀತಿ ನನ್ನ ಒಡಹುಟ್ಟಿದವರಿಗೆ ಇರಲಿಲ್ಲ’ ಎಂದು ದುಃಖ ಸಹಿಸಿಕೊಳ್ಳುತ್ತಾರೆ. ಇಂದು ನೆಮ್ಮದಿಯಿಂದ ಇರಲು ಎಲ್ಲವೂ ಇದೆ. ಕಾರು ಓಡಿಸಲು ಬರುವುದಿಲ್ಲ. ಡ್ರೈವರ್ ಇದ್ದಾನೆ ಸ್ಕೂಟರ್ ಓಡಿಸುತ್ತೇನೆ.
‘ನನಗೆ ಎರಡು ಗಂಡು ಮಕ್ಕಳು ಇಬ್ಬರಿಗೂ ಮದುವೆಯಾಗಿದೆ. ಒಬ್ಬ ಕೇರಳದಲ್ಲಿ ಫಿಲಂ ಸಂಸ್ಥೆಯಲ್ಲಿ ಮತ್ತೊಬ್ಬ ವೀರಾಜಪೇಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾನೆ’ ಎಂದು ತಮ್ಮ ಉದ್ಯಮ ಹಾಗೂ ಸಂಸಾರವನ್ನು ಪರಿಚಯಿಸುತ್ತಾರೆ.
ಹೈನುಗಾರಿಕೆಗೆ ಉತ್ತೇಜನ
ವೀರಾಜಪೇಟೆ ವ್ಯಾಪ್ತಿಯಲ್ಲಿ ಹಾಲಿನ ಸಹಕಾರ ಸಂಘಗಳಿಲ್ಲದೆ ಸಾಕಷ್ಟು ತೊಂದರೆ ಇದೆ. ಹಲವಾರು ರೈತರು ಹಾಲು ಮಾರಾಟ ಮಾಡಲು ಸಾಧ್ಯವಾಗದೆ ಹೈನುಗಾರಿಕೆಯಿಂದ ದೂರ ಉಳಿದಿದ್ದಾರೆ. ನಮ್ಮ ಪೂರ್ವಜರು ಗೋವು ಸಾಕಾಣಿಕೆಗಾಗಿ ಜಿಲ್ಲೆಯಲ್ಲಿ 38 ಸಾವಿರ ಎಕರೆ ಗೋಮಾಳ ಮೀಸಲಿರಿಸಿದ್ದರು.
ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಹೈನುಗಾರಿಕೆ ಉದ್ಯಮ ಚೇತರಿಕೆ ಯಾಗಿದೆ. ಬ್ಯಾಂಕುಗಳು ರೂ.2.75 ಕೋಟಿ ಸಾಲ ಸೌಲಭ್ಯ ನೀಡಿದೆ. ಓರ್ವ ಕೃಷಿಕನಿಗೆ ಎರಡು ಹಸು ಕೊಳ್ಳಲು ರೂ. 1.50 ಲಕ್ಷ ಸಾಲ ನೀಡುವುದ ರೊಂದಿಗೆ ಶೇ.25 ಸಹಾಯಧನ ಇದೆ. 10 ರಾಸು ಸಾಕುವ ಮತ್ತು ಕೊಟ್ಟಿಗೆ ನಿರ್ಮಾಣಕ್ಕೆ ರೂ.7 ಲಕ್ಷ ಸಾಲ ಸಿಗುತ್ತದೆ. ಕೊಡಗು ಜಿಲ್ಲೆಯಲ್ಲಿ ಪ್ರತಿನಿತ್ಯ 6 ಸಾವಿರ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟವಾಗುತ್ತಿದೆ.
ಕರ್ನಾಟಕ ರಾಜ್ಯದ ಹಳ್ಳಿಗಳಲ್ಲಿ ಇಂದು ಕೆ. ಎಂ .ಎಫ್ ನಡೆಸುವ 22 ಸಾವಿರ ಡೈರಿ ವ್ಯವಸ್ಥೆಯಿದೆ. 16522 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತವೆ. ವಿಶೇಷವೆಂದರೆ 4494 ಸೊಸೈಟಿಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ.
ರಾಜ್ಯವು 80 ಲಕ್ಷ ಲೀಟರ್ ಹಾಲು ಉತ್ಪಾದನೆಯೊಂದಿಗೆ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಕ್ಷೀರ ಉತ್ಪಾದನೆಗೆ ಉತ್ತೇಜನ ನೀಡಿ ನ್ಯಾಷನಲ್ ಡೈರಿ ಡೆವಲಪ್‍ಮೆಂಟ್ ಬೋರ್ಡ್ ಸ್ಥಾಪಿಸಿ ವರ್ಗೀಸ್ ಕುರಿಯನ್‍ರನ್ನು ಅಧ್ಯಕ್ಷರನ್ನಾಗಿ ಮಾಡಿ ಭಾರತದಲ್ಲಿ ಕ್ಷೀರಕ್ರಾಂತಿಯ ಹರಿಕಾರರಾಗಿದ್ದರು.
2014 ರಲ್ಲಿ ಕೇಂದ್ರ ಸರ್ಕಾರ ‘ನ್ಯಾಷನಲ್ ಪ್ರೋಗ್ರಾಂ ಫಾರ್ ಡೈರಿ ಡೆವಲಪ್‍ಮೆಂಟ್’ ಯೋಜನೆ ಅನುಷ್ಠಾನಕ್ಕೆ ತಂದಿದ್ದು, 2017-18 ರಲ್ಲಿ ನಬಾರ್ಡ್ ಡೈರಿಗಳ ಮೂಲ ಸೌಕರ್ಯ ವಿಸ್ತರಿಸಲು ಫಂಡ್ ಒಂದನ್ನು ಸ್ಥಾಪಿಸಿ ರೂ. 2865 ಕೋಟಿ ಮೀಸಲಿಟ್ಟಿದೆ. 1951 ರಲ್ಲಿ 17 ಮಿಲಿಯನ್ ಟನ್ ಹಾಲು ಹಾಗೂ ಹಾಲಿನ ಉತ್ಪನ್ನ ಉತ್ಪಾದಿಸುತ್ತಿದ್ದ ಭಾರತ, ಇಂದು 196.70 ಮಿಲಿಯನ್ ಟನ್ ಆಗಿದ್ದು, 2022 ಕ್ಕೆ 254.5 ಮಿಲಿಯನ್ ಟನ್ ಆಗುವ ಸಾಧ್ಯತೆಯಿದೆ. 1960ರಲ್ಲಿ ಶೇ.1.15 ರಷ್ಟಿದ್ದ ಹೈನುಗಾರಿಕೆ 2020 ಕ್ಕೆ ಶೇ.6.75 ರಷ್ಟು ಬೆಳವಣಿಗೆಯಾಗಿದೆ. ದೇಶದಲ್ಲಿ ಒಟ್ಟು 30 ರಿಂದ 35 ಶುದ್ಧ ದೇಸೀ ಗೋ ತಳಿಗಳನ್ನು ಕಾಣಬಹುದಾಗಿದೆ.
ಸಂಶೋಧನೆಯಂತೆ ಆರೋಗ್ಯ ಕಾಪಾಡಲು ಅಗತ್ಯವಿರುವ ‘ಎ2’ ಎನ್ನುವ ಅಂಶ ಕೇವಲ ದೇಸೀ ಹಸು ಹಾಗೂ ಎಮ್ಮೆಯ ಹಾಲಿನಲ್ಲಿ ಸಿಗುತ್ತದೆ. ಹೈನುಗಾರಿಕೆ ಇಂದು ಉದ್ಯಮವಾಗಿ ಬೆಳೆದು ರೈತರ ಪಾಲಿನ ಕಾಮಧೇನು ವಾಗಿದೆ. ಒಂದು ಅಂದಾಜಿನಂತೆ ದೇಶದಲ್ಲಿ ಎರಡು ಕೋಟಿ ಜನರು ಪ್ರತ್ಯಕ್ಷ ಹಾgU ಪರೋಕ್ಷವಾಗಿ ಹೈನು ಉದ್ಯಮದೊಂದಿಗೆ ಕೈ ಜೋಡಿಸಿದ್ದಾರೆ.