ಗೋಣಿಕೊಪ್ಪಲು, ನ. 5: ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜನೆಗೊಂಡಿದ್ದ ಪೊನ್ನಂಪೇಟೆ ಹೋಬಳಿ ಮಟ್ಟದ ರೈತ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರೈತ ಚೆಕ್ಕೆರ ಮಿನ್ನು ಬೆಳ್ಯಪ್ಪ, ರೈತ ಸಂಘದಿಂದ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿವೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ರೈತ ಸಂಘವು ನಿರಂತರ ಹೋರಾಟ ಹಮ್ಮಿಕೊಳ್ಳುವುದರಿಂದ ವಿವಿಧ ಇಲಾಖೆಯ ಅಧಿಕಾರಿಗಳು ಸ್ವಲ್ಪಮಟ್ಟಿಗೆ ಚುರುಕಾಗಿದ್ದಾರೆ. ಕಂದಾಯ ಇಲಾಖೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ರೈತ ಸಂಘವು ಹೋರಾಟ ರೂಪಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿತಿಮತಿ ಭಾಗದ ಪ್ರಮುಖ ಬೇಡಿಕೆಯಾದ ರೈಲ್ವೆ ಬ್ಯಾರಿಕೇಡ್ಅನ್ನು ಅಳವಡಿಸಲು ಬೆಂಗಳೂರಿನ ಮಟ್ಟದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸತತವಾಗಿ ಸಂಘಟನೆ ವತಿಯಿಂದ ಭೇಟಿ ಮಾಡುವ ಮೂಲಕ ಇಲ್ಲಿಯ ನೈಜ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಇದರಿಂದ ದೊಡ್ಡಮಟ್ಟದ ಅನು ದಾನವು ಸರ್ಕಾರದಿಂದ ಬಿಡುಗಡೆ ಯಾಗಲು ಅವಕಾಶವಾಯಿತು ಎಂದರು. ಸ್ಥಳೀಯ ರೈತರಾದ ಕಾಣತಂಡ ಮುತ್ತಪ್ಪ ಮಾತನಾಡಿ, ಕಾಡಾನೆ ಹಾವಳಿಯಿಂದ ರೈತರು ಬೆಳೆದ ಬೆಳೆಗಳು ರೈತರ ಕೈ ಸೇರುತ್ತಿಲ್ಲ. ಈ ಬಗ್ಗೆ ರೈತ ಹೋರಾಟಗಾರರು ಅಧಿಕಾರಿಗಳ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು. ಮತ್ತೋರ್ವ ರೈತರಾದ ಚೆಪ್ಪುಡೀರ ರಂಜನ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ರೈತರ ಪಂಪ್ ಸೆಟ್ಗಳಿಗೆ ವಿದ್ಯುತ್ ನೀಡಿದ್ದರೂ ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಟ್ರಾನ್ಸ್ಫಾರ್ಮ್ರ್ ಅಳವಡಿಸಿದ್ದರೂ ವಿದ್ಯುತ್ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದು ರೈತರ ಸಮಸ್ಯೆಗೆ ಪರಿಹಾರ ನೀಡಬೇಕೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಪ್ರಾಸ್ತವಿಕವಾಗಿ ಮಾತನಾಡಿ, ರೈತ ಸಂಘದ ಉದ್ದೇಶಗಳು, ಹೋರಾಟ ಗಳ ಬಗ್ಗೆ ವಿವರ ನೀಡಿದರು. ವೇದಿಕೆಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್ ಮತ್ತಿತರರು ಹಾಜರಿದ್ದರು. ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳ ಪಂಡ ಮನು, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ನಲ್ಲೂರು ಅಧ್ಯಕ್ಷ ತೀತರಮಾಡ ರಾಜ ಹಾಗೂ ಇತರರು ಹಾಜರಿದ್ದರು.