ನಾಪೆÇೀಕ್ಲು, ನ. 5: ಸಮೀಪದ ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಮತ್ತು ಯುವಕಸಂಘದ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ದಿ. ಕುಂಡ್ಯೋಳಂಡ ಜಯ ಪೂವಣ್ಣ ಅವರ ಜ್ಞಾಪಕಾರ್ಥವಾಗಿ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಟೋಳಿರ ಎಸ್.ಕುಟ್ಟಪ್ಪ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನೌಕಾ ಸೇನೆಯ ನಿವೃತ್ತ ಕುಂಡ್ಯೋಳಂಡ ಸುರೇಶ್ ಉತ್ತಪ್ಪ, ಕಾಂಡಂಡ ಜಯ ಕರುಂಬಯ್ಯ, ಕನ್ನಂಬಿರ ಚಂಗಪ್ಪ, ಅಪ್ಪಚ್ಚಿರ ಮಹೇಶ್, ಕುಂಬಾರರ ಬಿದ್ದಪ್ಪ, ಕಲಿಯಂಡ ದೀಪು ಚಿಣ್ಣಪ್ಪ, ಮತ್ತಿತರರು ಇದ್ದರು.

ಕುಟುಂಬಗಳ ನಡುವೆ ನಡೆದ ರಿಂಕ್ ಹಾಕಿ ಕ್ರೀಡೆಯಲ್ಲಿ ಕಾಡಂಡ ಕುಟುಂಬಸ್ಥರು ಪ್ರಥಮ ಸ್ಥಾನ ಪಡೆದರೆ, ಕೇಟೋಳಿರ ಕುಟುಂಬಸ್ಥರು ದ್ವಿತೀಯ ಸ್ಥಾನ ಪಡೆದರು. ಹಾಗೆಯೇ, ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಕಾಂಡಂಡ ಅರ್ಜುನ್ ಪ್ರಥಮ, ಕಾಂಡಂಡ ಕಾರ್ಯಪ್ಪ ದ್ವಿತೀಯ ಸ್ಥಾನ ಪಡೆದರು.

ರಿಂಕ್ ಹಾಕಿ ಕ್ರೀಡೆಯ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಕಾಟುಮಣಿಯಂಡ ಜತ್ತಿ, ಪ್ರೇಮ ದಂಪತಿಗಳು ನಗದು ಬಹುಮಾನ ನೀಡಿದರು. ವಿವಿಧ ಬಹುಮಾನ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ದಿ. ಕುಂಡ್ಯೋಳಂಡ ಜಯ ಪೂವಣ್ಣ ಅವರ ಪತ್ನಿ ಹೇಮಲತಾ ಹಾಗೂ ಕುಂಡ್ಯೋಳಂಡ ಶ್ರೀಮತಿ ಕಾರ್ಯಪ್ಪ, ವಿಜಯ ಮುತ್ತಣ್ಣ ಸಹೋದರರು ಉದಾರವಾಗಿ ನೀಡಿದರು. ಈ ಸಂದರ್ಭದಲ್ಲಿ ದಿ. ಶಿಕ್ಷಕ ಕುಂಡ್ಯೋಳಂಡ ಜಯ ಪೂವಣ್ಣ ಅವರ ಆದರ್ಶ, ಸಮಾಜ ಸೇವೆಗಳ ಬಗ್ಗೆ ಕನ್ನಂಬಿರ ಸುಧಿ ತಿಮ್ಮಯ್ಯ ಮಾತನಾಡಿದರು. ಯುವಕ ಸಂಘದ ಅಧ್ಯಕ್ಷ ಡಾಲಿ ಅಚ್ಚಪ್ಪ ಸ್ವಾಗತಿಸಿ, ಕುಂಡ್ಯೋಳಂಡ ವಿಶು ಪೂವಯ್ಯ ವಂದಿಸಿದರು.