ಕೂಡಿಗೆ, ನ. 5: ಕೂಡಿಗೆಯಲ್ಲಿ ರುವ ಜಿಲ್ಲೆಯ ರೇಷ್ಮೆ ಇಲಾಖೆಯ ಕೃಷಿ ಕ್ಷೇತ್ರದ ಆವರಣದಲ್ಲಿ ಬಿತ್ತನೆ ಗೂಡು ಉತ್ಪತ್ತಿಯ ಜೊತೆಗೆ ಮೂಲ ತಳಿ ಬಿತ್ತನೆ ಕೆಲಸ ಆರಂಭವಾಗಿದೆ.

ಜಿಲ್ಲೆಯ ರೇಷ್ಮೆ ಇಲಾಖೆ ಕೂಡಿಗೆಯ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮಾಡುವ ರೇಷ್ಮೆ ಮೊಟ್ಟೆಗೆ ರಾಜ್ಯದಲ್ಲಿ ಮೊದಲೇ ಸ್ಥಾನವಿದ್ದು ಇಲ್ಲಿ ಉತ್ಪಾದನೆ ಆಗುವ ರೇಷ್ಮೆ ಗೂಡು ರಾಜ್ಯದಲ್ಲಿ ಹೆಸರುವಾಸಿ ಯಾಗಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ವಾರ್ಷಿಕ 5 ಬೆಳೆಗಳನ್ನು ತೆಗೆದು ರೇಷ್ಮೆ ಗೂಡನ್ನು ಹಾಸನಕ್ಕೆ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿಂದ ಗೂಡನ್ನು ರೇಷ್ಮೆ ಮೊಟ್ಟೆಗೆ ಉಪಯೋಗಿಸಿ ನಂತರ ರಾಜ್ಯದ ಎಲ್ಲಾ ಗೂಡು ಬೆಳೆಯುವ ಬಿತ್ತನೆ ಕೇಂದ್ರಗಳಿಗೆ ಸರಕಾರದ ನಿಯಮನುಸಾರ ಸರಬರಾಜು ಮಾಡಲಾಗುತ್ತದೆ.

ಕೂಡಿಗೆಯಲ್ಲಿರುವ ರೇಷ್ಮೆ ಇಲಾಖೆಯ ಒಂದುವರೆ ಎಕರೆಗಳಷ್ಟು ಪ್ರದೇಶದಲ್ಲಿ ಹಿಪ್ಪನೇರಳೆ ಗಿಡಗಳನ್ನು ನೆಟ್ಟು ಸೊಪ್ಪನ್ನು ಬೆಳೆಸಲಾಗುತ್ತದೆ. ಈ ಹಿಪ್ಪನೇರಳೆ ಸೊಪ್ಪನ್ನು ಬೆಳೆಸಿದರೆ ಉತ್ತಮವಾದ ರೇಷ್ಮೆ ಗೂಡು ಉತ್ಪತ್ತಿ ಯೊಂದಿಗೆ ಬಿತ್ತನೆ ಮೊಟ್ಟೆಗೆ ಪೂರಕವಾ ಗುವುದು ಎಂದು ಕೂಡಿಗೆ ರೇಷ್ಮೆ ಕ್ಷೇತ್ರದ ಅಧೀಕ್ಷಕ ಮಹೇಶ್ ತಿಳಿಸಿದ್ದಾರೆ.

ಸರಕಾರದ ನಿಯಮಾನುಸಾರ ರೈತರು ರೇಷ್ಮೆ ಬೆಳೆಯನ್ನು ಬೆಳೆಯಲು ವೈಜ್ಞಾನಿಕ ವ್ಯವಸ್ಥೆ ಜೊತೆಗೆ ಹವಾಮಾನಕ್ಕೆ ಅನುಗುಣವಾಗಿ ಉತ್ತಮ ಬೆಳೆ ಬರುವ ರೇಷ್ಮೆ ಮೊಟ್ಟೆ ಉತ್ಪಾದನೆ ಮಾಡಲಾಗುತ್ತಿದೆ. ರೇಷ್ಮೆ ಮೊಟ್ಟೆಗಳನ್ನು ರೈತರಿಗೆ ವಿತರಣೆ ಮಾಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ರೇಷ್ಮೆ ಬೆಳೆಗಾರರು ಉತ್ತಮ ಗುಣಮಟ್ಟದ ರೇಷ್ಮೆ ಗೂಡನ್ನು ಬೆಳೆದು ತಮ್ಮ ಅರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುಕೂಲ ವಾಗುತ್ತಿದೆ. ಅದರಂತೆ ಕೂಡಿಗೆ ರೇಷ್ಮೆ ಇಲಾಖೆಯ ಕೃಷಿ ಕ್ಷೇತ್ರದಲ್ಲಿ ಮೂಲ ತಳಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜೊತೆಗೆ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಈ ಕೇಂದ್ರದ ಮಾಹಿತಿ ಯನ್ನು ನೀಡಿ ರೇಷ್ಮೆ ಬೆಳೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ. ರೇಷ್ಮೆ ಗೂಡಿಗೆ ಉತ್ತಮ ಬೆಲೆ ಇರುವುದರಿಂದ ಜಿಲ್ಲೆಯ ರೈತರು ರೇಷ್ಮೆ ಬೆಳೆಯಲ್ಲಿ ತೊಡಗಿಸಿಕೊಳ್ಳಲು ಅಧೀಕ್ಷಕ ಮಹೇಶ್ ಮನವಿ ಮಾಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.