ಮಡಿಕೇರಿ, ನ. 4: ಜಿಲ್ಲೆಯ ಜನತೆಗೆ ಉತ್ತಮ ಕುಡಿಯುವ ನೀರು ಪೂರೈಕೆ ಮಾಡುವ ಸಂಬಂಧ ಬಾಕಿ ಇರುವಂತಹ ಕುಡಿಯುವ ನೀರಿನ ಸಂಪರ್ಕ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಜೊತೆಗೆ ಸಮರ್ಪಕವಾದ ರಸ್ತೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನತೆಗಾಗಿ ಕೇಂದ್ರ ಸರ್ಕಾರ ರೂಪಿಸಿ ರುವ ಯೋಜನೆಗಳು ಚಾಚೂ ತಪ್ಪದೆ ಜನರಿಗೆ ತಲುಪ ಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯೊಂದಿಗೆ ಕೆಲಸ ಮಾಡಬೇಕೆಂದು ಅವರು ನಿರ್ದೇಶನ ನೀಡಿದರು.ನನ್ನನ್ನು ಆಹ್ವಾನಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಬಹುಪಾಲು ಅಭಿವೃದ್ಧಿ ಕಾಮಗಾರಿಗಳು ಕೇಂದ್ರ ಸರ್ಕಾರದ ಅನುದಾನದಿಂದಲೇ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಯಾವದೇ ಕಾಮಗಾರಿಗಳನ್ನು ಕೈಗೊಳ್ಳುವ ಸಂದರ್ಭ ಲೋಕಸಭಾ ಸದಸ್ಯ ನಾಗಿರುವ ತನ್ನನ್ನು ಆಹ್ವಾನಿಸಬೇಕು ಅಥವಾ ಮಾಹಿತಿ ನೀಡಬೇಕು ಎಂದು ಮೂರು ತಾಲೂಕು ಪಂಚಾಯಿತಿ

(ಮೊದಲ ಪುಟದಿಂದ) ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರತಾಪ್ ಸಿಂಹ ಸೂಚಿಸಿದರು.

ಸರ್ಕಾರಿ ಆದೇಶ ಬಂದಿಲ್ಲ

ಕೊಡಗಿನ ಚಿತ್ರನಟ ಜೈಜಗದೀಶ್ ಅವರಿಗೆ ಸುಮಾರು ಎರಡೂವರೆ ಲಕ್ಷದಷ್ಟು ವಿದ್ಯುತ್ ಬಿಲ್ ನೀಡಲಾಗಿದೆ. ಈ ಬಗ್ಗೆ ಪ್ರತಾಪ್ ಸಿಂಹ ಸೆಸ್ಕ್ ಅಧಿಕಾರಿ ಸೋಮ ಶೇಖರ್ ಅವರ ಬಳಿ ವಿವರ ಬಯಸಿದಾಗ ಪ್ರತಿಕ್ರಿಯಿಸಿದ ಸೋಮಶೇಖರ್ ಅವರು, ವಿದ್ಯುತ್ ಜಾಗೃತ ದಳದವರು ಸ್ಥಳಕ್ಕೆ ಭೇಟಿ ನೀಡಿ ಅವರ ಮನೆ ಹಾಗೂ ತೋಟ ಸೇರಿದಂತೆ ಪಾವತಿಗೆ ಬಾಕಿ ಇದ್ದ ಹಣಕ್ಕೆ ದಂಡ ಸೇರಿಸಿ ಐದು ವರ್ಷದ ಬಿಲ್ ವಿಧಿಸಿದ್ದು, ಸೆಸ್ಕ್ ನೀಡಿರುವ ಬಿಲ್ ಅಲ್ಲ ಎಂದು ಹೇಳಿದರು. ಈ ವೇಳೆ 10 ಹೆಚ್‍ಪಿ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಈ ಹಿಂದೆ ಉಸ್ತುವಾರಿ ಸಚಿವರೇ ಸೂಚಿಸಿರುವ ಬಗ್ಗೆ ಪ್ರತಾಪ್ ಸಿಂಹ ಪ್ರಸ್ತಾಪಿಸಿದಾಗ ಆ ಬಗ್ಗೆ ಸರ್ಕಾರ ದಿಂದ ಯಾವದೇ ಆದೇಶ ಬಂದಿಲ್ಲ ಎಂದು ಸೋಮಶೇಖರ್ ಮಾಹಿತಿ ಯಿತ್ತರು.

ಪ್ರಸ್ತಾವನೆ ಕೊಡಿ

ಹಾಡಿಗಳಲ್ಲಿ ಮನೆ ನಿರ್ಮಾಣ ಸಂಬಂಧ ಕೆಲ ಸಮಸ್ಯೆಗಳಿವೆ ಎಂದು ಅಧಿಕಾರಿ ಶಿವಕುಮಾರ್ ಮಾಹಿತಿ ನೀಡಿದಾಗ ಗಿರಿಜನ ಅಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಜನಪರ ಕೆಲಸಗಳಿಗೆ ಯಾವದೇ ತೊಡಕುಗಳಿದ್ದಲ್ಲಿ ಮುಂದಿನ ವಾರ ನಡೆಯುವ ಉಸ್ತುವಾರಿ ಸಚಿವರ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಪ್ರತಾಪ್ ಸಿಂಹ ಸಲಹೆಯಿತ್ತರು.

ಈಗ ಕೆಲಸಕ್ಕೆ ಒಳ್ಳೆಯ ಸಮಯ

ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತುತ ಆಡಳಿತ ಮಂಡಳಿ ಇಲ್ಲ. ಇಂತಹ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಬಹುದು. ಜನಪ್ರತಿನಿಧಿಗಳ ನೇಮಕವಾದರೆ ಕೆಲಸ ಮಾಡಲು ತೊಂದರೆ ಎದುರಾಗುತ್ತದೆ. ಈಗ ಸ್ವಯಂ ನಿರ್ಧಾರದೊಂದಿಗೆ ಜನಪರ ಕೆಲಸಗಳನ್ನು ಮಾಡಬಹುದು ಈ. ದಿಸೆಯಲ್ಲಿ ಕಾರ್ಯಪ್ರವೃತ್ತರಾಗುವಂತೆ ನಗರಸಭಾ ಆಯುಕ್ತರು ಹಾಗೂ ತಾ.ಪಂ. ಇಓಗಳಿಗೆ ಸಂಸದ ಪ್ರತಾಪ್ ಸಿಂಹ ಹೇಳಿದರು.

ತರಾತುರಿಯ ಸಭೆ

ಇಂದು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ ಆರಂಭವಾಗಲು ಸುಮಾರು ಮುಕ್ಕಾಲು ಗಂಟೆ ವಿಳಂಬವಾಯಿತು. ಸಭೆಗೆ ತಡವಾಗಿ ಬಂದ ಸಂಸದ ಪ್ರತಾಪ್ ಸಿಂಹ ವೈಯಕ್ತಿಕ ಕಾರಣದಿಂದ ತಡವಾದ ಬಗ್ಗೆ ಸಭೆಯ ಗಮನಕ್ಕೆ ತಂದರು. ಕೊರೊನಾ ಹಿನ್ನೆಲೆ ಹಲವು ಇಲಾಖೆಗಳಲ್ಲಿ ವಿಳಂಬವಾಗಿರುವ ಸಾಕಷ್ಟು ಅಭಿವೃದ್ಧಿ ಕೆಲಸಗಳು ತುರ್ತಾಗಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ಸಮಯ ವ್ಯರ್ಥ ಮಾಡದೆ ಅತೀ ಮುಖ್ಯವಾದ ಇಲಾಖೆಗಳ ಪ್ರಗತಿಯ ಬಗ್ಗೆ ಮಾತ್ರ ಸಭೆ ನಡೆಸಲಿದ್ದೇನೆ ಎಂದು ಹೇಳಿ ಸಭೆ ಆರಂಭಿಸಿದ ಸಂಸದರು ಒಂದು ಕಾಲು ಗಂಟೆಯಲ್ಲಿ ಸಭೆಯನ್ನೂ ಮುಗಿಸಿದರು.

ಕೋವಿಡ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಸಂಬಂಧ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ ಅವರಲ್ಲಿ ಮನವಿ ಮಾಡಲಾಗಿದ್ದು, ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ ಎಂದು ಪ್ರತಾಪ್ ಸಿಂಹ ತಿಳಿಸಿದರು. 400 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಮೂರು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ ಅವರು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡುತ್ತಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಗೊಬ್ಬರ ತಯಾರಿಸುವುದು, ಅಂಗನವಾಡಿ, ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳ ಉದ್ಯಾನವನ ಅಭಿವೃದ್ಧಿ ಪಡಿಸುವುದು, ಸ್ವಚ್ಛ ಸುಂದರ ಗ್ರಾಮಗಳನ್ನಾಗಿ ಮಾಡಬೇಕು ಎಂದು ಸಂಸದರು ಸೂಚಿಸಿದರು.

ಈಗಾಗಲೇ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೋಂದಾಯಿಸಿರುವವರಿಗೆ ಕೆಲಸ ನೀಡಬೇಕು. ಶೌಚಾಲಯ ನಿರ್ಮಾಣ, ಕುರಿ ದೊಡ್ಡಿ ನಿರ್ಮಾಣ, ಕಾಂಕ್ರೀಟ್ ರಸ್ತೆ ನಿರ್ಮಾಣ ಹೀಗೆ ಹಲವು ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಬೇಕು. ಆ ನಿಟ್ಟಿನಲ್ಲಿ ಈಗಾಗಲೇ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ. ಹಾಗೆಯೇ ವೀರಾಜಪೇಟೆ ತಾಲೂಕಿನಲ್ಲಿ ತಾ. 12 ರಂದು ಶಾಸಕ ಕೆ.ಜಿ.ಬೋಪಯ್ಯ ಅವರ ಉಪಸ್ಥಿತಿಯಲ್ಲಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ಸಂಸದರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಕೊಲ್ಲೀರ ಗೋಪಿ ಚಿನ್ನಪ್ಪ ಮತ್ತು ಪುಷ್ಪ ಅವರು ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ರಸ್ತೆಗಳು ಹದಗೆಟ್ಟಿದ್ದು, ಸರಿಪಡಿಸುವ ಕಾರ್ಯವಾಗಬೇಕು ಎಂದು ಗಮನ ಸೆಳೆದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ ಗಿರಿಜನರಿಗೆ ಮನೆ ನಿರ್ಮಾಣ ಸಂಬಂಧಿಸಿದಂತೆ ಬಿಲ್ಲುಗಳು ಆಗುತ್ತಿಲ್ಲ. ಇದರಿಂದಾಗಿ ಮನೆ ಕಾಮಗಾರಿ ಪ್ರಗತಿಯಾಗುತ್ತಿಲ್ಲ ಎಂದು ಸಂಸದರ ಗಮನಕ್ಕೆ ತಂದರು. ಬಾಳೆಲೆ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ತುಂಬಾ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಸಮಿತಿ ಸದಸ್ಯೆ ಯಮುನಾ ಚಂಗಪ್ಪ ಗಮನ ಸೆಳೆದರು. ಈ ಬಗ್ಗೆ ಮಾಹಿತಿ ನೀಡಿದ ಸೋಮಶೇಖರ್ ಅವರು ಬಾಳೆಲೆಯಲ್ಲಿ ಟ್ರಾನ್ಸ್‍ಫಾರ್ಮ್ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಮಾತನಾಡಿ ಮಡಿಕೇರಿ ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಕಾಲಮಿತಿ ಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಪ್ರಕೃತಿ ವಿಕೋಪದಿಂದ ಕಾಫಿ ಬೆಳೆ ಹಾನಿ ಸಂಬಂಧಿಸಿದಂತೆ ಮಾಹಿತಿಯನ್ನು ಸಂಸದರು ಪಡೆದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲೆಯಲ್ಲಿ ಇದುವರೆಗೆ ಕಾಫಿ ಬೆಳೆ ಹಾನಿ ಸಂಬಂಧಿಸಿದಂತೆ 20 ಸಾವಿರ ಅರ್ಜಿಗಳು ದಾಖಲಾಗಿದೆ ಎಂದರು.

ಕಾಫಿ ಬೆಳೆ ಹಾನಿ ಸಂಬಂಧ ಬಾಳೆಲೆ ವ್ಯಾಪ್ತಿಯಲ್ಲಿ ಯಾವುದೇ ಅರ್ಜಿಗಳು ದಾಖಲಾಗದಿರುವ ಬಗ್ಗೆ ಗಮನಹರಿಸಬೇಕು. ಕಾಫಿ ಮಂಡಳಿಯವರು ಹೋಬಳಿವಾರು ಕಾಫಿ ಬೆಳೆ ಹಾನಿ ಸಂಬಂಧ ಕಂದಾಯ ಇಲಾಖೆಗೆ ದೃಢೀಕೃತ ಮಾಹಿತಿ ನೀಡುವಂತೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಕೋವಿಡ್ 19 ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.

ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ ಇತರರು ಇದ್ದರು.