ಹೆಬ್ಬಾಲೆ, ನ. 3: ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘವು 2019-20ನೇ ಸಾಲಿನಲ್ಲಿ ರೂ. 11.45 ಲಕ್ಷ ನಿವ್ವಳ ಲಾಭಗಳಿಸಿ ಅಭಿವೃದ್ಧಿಯತ್ತ ಸಾಗುತ್ತಿದ್ದು, ರೈತರು ಹಾಗೂ ಸಂಘ ಸಿಬ್ಬಂದಿಗಳ ಪರಿಶ್ರಮದ ಫಲವಾಗಿದೆ ಎಂದು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ಪಿ. ರಾಜು ಹೇಳಿದರು.
ಸಮೀಪದ ಶಿರಂಗಾಲ ದೇವಾಲಯ ಸಮಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.
1978ರಲ್ಲಿ ಪ್ರಾರಂಭವಾದ ಈ ಸಂಘವು ಹಿಂದಿನ ಕಾರ್ಯದರ್ಶಿ ದಿ. ಎಂ.ಎಂ. ಶಿವರಾಮ್ ಹಾಗೂ ಆಡಳಿತ ಮಂಡಳಿ ಪರಿಶ್ರಮದಿಂದ ಲಾಭದಲ್ಲಿ ಮುನ್ನಡೆಯುತ್ತಿದೆ. ಕೊಡಗು ಜಿಲ್ಲೆಯ 31 ಹಾಲು ಉತ್ಪಾದಕರ ಸಂಘಗಳ ಪೈಕಿ ನಮ್ಮ ಸಂಘವು ಹಾಲಿನ ವ್ಯವಹಾರ ಹಾಗೂ ಲಾಭಗಳಿಕೆಯಲ್ಲಿ ಮುಂಚೂಣಿ ಯಲ್ಲಿದೆ. ಈ ಹಿನ್ನೆಲೆ ಸಂಘದ ಸದಸ್ಯರಿಗೆ ದೀಪಾವಳಿ ಹಬ್ಬಕ್ಕೆ ರೂ. 4.5. ಲಕ್ಷ ಬೋನಸ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್‍ಕುಮಾರ್ ಮಾತನಾಡಿ, ಗುಣಮಟ್ಟದ ಹಾಲು ಉತ್ಪಾದನೆಗೆ ರೈತರು ಹೆಚ್ಚಿನ ಗಮನ ಹರಿಸಬೇಕು. ಇದರಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಬೆಳವಣಿಗೆಗೆ ಸಾಧ್ಯವಾಗಲಿದೆ ಎಂದರು.
ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಮಾತನಾಡಿ, ರೈತರು ಹಸುಗಳ ನಿರ್ವಹಣೆ ಬಗ್ಗೆ ಹೆಚ್ಚು ಅರಿವು ಹೊಂದಬೇಕು. ವರ್ಷಕ್ಕೆ ಎರಡು ಬಾರಿ ಜಂತುಹುಳುವಿನ ಮಾತ್ರೆ ನೀಡಬೇಕು. ಗುಣಮಟ್ಟದ ಹಾಲು ಉತ್ಪಾದನೆಗೆ ಗಮನ ಹರಿಸಬೇಕು. ಕಾಲುಬಾಯಿ ಲಸಿಕೆ ಹಾಗೂ ಕೆಚ್ಚಲು ಬಾಹು ಕಾಯಿಲೆಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.
ಈ ಸಂದರ್ಭ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷೆ ರತ್ನಮ್ಮ, ನಿರ್ದೇಶಕರಾದ ಎಸ್.ಹೆಚ್. ರಾಜಪ್ಪ, ಎಸ್.ಸಿ. ಪ್ರಕಾಶ್, ಎಂ.ಪಿ. ಸುರೇಶ್, ಎನ್.ಎಸ್. ವಿಷಕಂಠ, ಎಸ್.ಎಸ್. ಕೃಷ್ಣ, ಎಸ್.ಎಸ್. ಉಮೇಶ್, ಎಂ.ಎಸ್. ವಿಜಯಕುಮಾರ್, ಮನೋಜಾಕ್ಷಿ, ಎಸ್.ಸಿ. ಗಣೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಪ್ಪ, ಕಾರ್ಯದರ್ಶಿ ಮಹೇಶ್, ಮುಖಂಡರಾದ ಬಸವಣಪ್ಪ, ಸಿ.ಎನ್. ಲೋಕೇಶ್, ಸಂಘದ ಕಾರ್ಯದರ್ಶಿ ಎಸ್.ಎಂ. ಹರೀಶ್ ಉಪಸ್ಥಿತರಿದ್ದರು. ಕಳೆದ ಸಾಲಿನ ಮಹಾಸಭೆ ನಡಾವಳಿ, ಆಡಿಟ್ ವರದಿ ಓದಿ ಅಂಗೀಕರಿಸಲಾಯಿತು.
ಇದೇ ಸಂದರ್ಭ ಸಂಘಕ್ಕೆ ಹೆಚ್ಚಿನ ಹಾಲು ಒದಗಿಸಿದ ಎಸ್.ಎಸ್. ಮಂಜುನಾಥ್, ಟಿ.ಎಂ. ಚಿದಾನಂದ, ಹೆಚ್.ಆರ್. ರಾಣಿ ಅವರಿಗೆ ಬಹುಮಾನ ನೀಡಲಾಯಿತು. ಜೊತೆಗೆ 7ನೇ, 10ನೇ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡಲಾಯಿತು.