ಮಡಿಕೇರಿ, ನ.2: ಮಡಿಕೇರಿ ಗ್ರಾಮಾಂತರ ಯುವಮೋರ್ಚದ ವತಿಯಿಂದ ಯುವ ಮೋರ್ಚಾದ ಅಧ್ಯಕ್ಷÀ ಹೇಮಂತ್ ತೋರೆರ ಅವರ ನೇತೃತ್ವದಲ್ಲಿ, ಸ್ಥಳೀಯರ ಸಹಕಾರದೊಂದಿಗೆ ತಲಕಾವೇರಿ ಮತ್ತು ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ತಲಕಾವೇರಿ ಪುಣ್ಯಕ್ಷೇತ್ರದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಮೊದಲಿಗೆ ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಲಕಾವೇರಿಗೆ ತೆರಳಿ ಅಲ್ಲಿ ಸ್ವಚ್ಛ ಮಾಡಿ ಅಲ್ಲಿರುವ ಅಂಗಡಿ ಮಾಲೀಕರುಗಳಿಗೆ ಎಲ್ಲೆಂದರಲ್ಲಿ ಕಸ ಎಸೆಯದಂತೆ, ದೇವಾಲಯದ ಪವಿತ್ರ ಭೂಮಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿಕೊಳ್ಳಲಾಯಿತು.

ನಂತರ ತಲಕಾವೇರಿಯಲ್ಲಿ ಯುವ ಮೋರ್ಚಾದ ಸಭೆ ಸರಳವಾಗಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಗ್ರಾಮಾಂತರ ಯುವ ಮೋರ್ಚಾದ ಅಧ್ಯಕ್ಷÀ ಹೇಮಂತ್ ತೋರೆರ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೇವಾಲಯದ ಆಡಳಿತ ಮಂಡಳಿಯ ಮಾಜಿ ಸದಸ್ಯ ಮನೋಜ್ ಕುಮಾರ್ ಕುಯ್ಯಮುಡಿ ಅವರು ಇಡೀ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗಳಿಗೂ ಈ ಸ್ವಚ್ಛತಾ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡಬೇಕು ಹಾಗೂ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತಿಳಿಸಬೇಕೆಂದು ಯುವ ಮೋರ್ಚಾದ ಸರ್ವ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರದ ಕುದುಪಜೆ ಪುರುಷೋತ್ತÀಮ್, ಎಸ್‍ಟಿ ಮೋರ್ಚಾದ ಮಿಟ್ಟು ರಂಜಿತ್, ಭಾಗಮಂಡಲ ಶಕ್ತಿ ಕೇಂದ್ರದ ಸಹಪ್ರಮುಖ್ ಚಲನ್ ನಿಡ್ಯಮಲೆ, ಮಾಜಿ ಅಧ್ಯಕ್ಷ ಅಮೆ ಪದ್ಮಯ್ಯ, ಸಂಚಲಾಕ ಸಂಜು ಪಟ್ಟಮಾಡ, ಯುವ ಮೋರ್ಚಾದ ಪದಾಧಿಕಾರಿಗಳು ಹಾಗೂ ಸದಸ್ಯರು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡಿದ್ದರು.