ಕುಶಾಲನಗರ, ನ. 2: ಕಾವೇರಿ ನದಿ ಕಲುಷಿತವಾಗುವುದನ್ನು ತಪ್ಪಿಸಲು ಪಟ್ಟಣ ಪಂಚಾಯಿತಿ ವಾರ್ಷಿಕ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಕುಶಾಲನಗರ ಪ.ಪಂ. ಸದಸ್ಯ ಹಾಗೂ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ. ಅಮೃತ್ರಾಜ್ ಭರವಸೆ ನೀಡಿದರು.
ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ 112ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನದಿ ಸಂರಕ್ಷಣೆ ನಿಟ್ಟಿನಲ್ಲಿ ಜನರಿಗೆ ಅರಿವು, ಜಾಗೃತಿ ಹಾಗೂ ಹೋರಾಟ ನಡೆಸುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅಮೃತ್ರಾಜ್, ಕಾವೇರಿಯ ಕೂಗು ಆದಷ್ಟು ಬೇಗನೆ ಕೇಂದ್ರ ಸರಕಾರದ ಗಮನ ಸೆಳೆಯುವಂತಾಗಲಿ ಎಂದರು.
ಈ ಸಂದರ್ಭ ಮಾತನಾಡಿದ ಕುಡಾ ಸದಸ್ಯರಾದ ವೈಶಾಖ್, ಸಮಾಜದಲ್ಲಿ ಉತ್ತಮ ಕೆಲಸಗಳು ನಡೆಯುವ ಸಂದರ್ಭ ಋಣಾತ್ಮಕ ಪ್ರತಿಕ್ರಿಯೆಗಳು ಬರುವುದು ಸರ್ವೆ ಸಾಮಾನ್ಯ. ಅದನ್ನು ಮೀರಿ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕಾವೇರಿ ಸ್ವಚ್ಛತಾ ಆಂದೋಲನದ ಕಾರ್ಯಕ್ರಮ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಮಹಾ ಆರತಿ ಬೆಳಗುವ ಮುನ್ನ ನದಿಗೆ ಅಷ್ಟೋತ್ತರ, ಕುಂಕುಮಾರ್ಚನೆ ನೆರವೇರಿಸಿದ ಬಳಿಕ ಮಹಾ ಆರತಿ ಬೆಳಗಲಾಯಿತು. ಅರ್ಚಕ ಕೃಷ್ಣಮೂರ್ತಿ ಭಟ್ ಪೂಜಾ ವಿಧಿ ನೆರವೇರಿಸಿದರು.
ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಆರತಿ ಬಳಗದ ವನಿತಾ ಚಂದ್ರಮೋಹನ್, ಡಿ.ಆರ್. ಸೋಮಶೇಖರ್, ಬಿ.ಜೆ.ಅಣ್ಣಯ್ಯ ಮತ್ತಿತರರು ಇದ್ದರು.
ಕುಶಾಲನಗರ ಬಾರವಿ ಕನ್ನಡ ಸಂಘದ ಆಶ್ರಯದಲ್ಲಿ ಹುಣ್ಣಿಮೆ ಅಂಗವಾಗಿ ಕೊಪ್ಪ ಕಾವೇರಿ ಪ್ರತಿಮೆಗೆ ಅಭಿಷೇಕ ಪೂಜಾ ವಿಧಿವಿಧಾನ ನೆರವೇರಿಸಲಾಯಿತು.
ಈ ಸಂದರ್ಭ ಉದ್ಯಮಿಗಳಾದ ಸಾತಪ್ಪನ್, ಸಂಘದ ಪ್ರಮುಖ ಬಬೀಂದ್ರಪ್ರಸಾದ್, ರವೀಂದ್ರಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರು ಇದ್ದರು.