ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೆ.ಬಾಡಗ ಗ್ರಾಮದ ಎನ್.ಪಿ. ರೇಖಾ ಎಂಬವರು ತಾ.28ರಂದು ತಮ್ಮ ಮಕ್ಕಳೊಂದಿಗೆ ಹಮ್ಮಿಯಾಲದ ತಮ್ಮ ತಾಯಿ ಮನೆಗೆ ತೆರಳಿದ್ದ ವೇಳೆ ಅವರ ಮನೆಯಿಂದ ಬಾತ್‍ರೂಂ ಶೀಟ್ ಒಡೆದು ಒಳನುಗ್ಗಿ 86 ಸಾವಿರ ರೂ. ಮೌಲ್ಯದ ಚಿನ್ನದ ಎರಡು ಎಳೆಯ ಕರಿಮಣಿ ಸರ, ಚಿನ್ನದ ಸರ, ಚಿನ್ನದ ಚಿಕ್ಕ ಸರ ಹಾಗೂ ಚಿನ್ನದ ಉಂಗುರವನ್ನು ಕಳವು ಮಾಡಲಾಗಿತ್ತು.

ಈ ಬಗ್ಗೆ ರೇಖಾ ನೀಡಿದ ದೂರಿನನ್ವಯ ತನಿಖೆ ನಡೆಸಿದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಬೆಂಗಳೂರಿನ ದೊಡ್ಡಬೆಟ್ಟಹಳ್ಳಿ ನಿವಾಸಿಯಾಗಿದ್ದು, ಪ್ರಸ್ತುತ ಬಿರುನಾಣಿಯ ತೆರಾಲು ಗ್ರಾಮದಲ್ಲಿ ವಾಸವಿದ್ದ ನಂಜಪ್ಪ ಅಲಿಯಾಸ್ ಸೂಚನ್ ಎಂಬಾತನನ್ನು ತೆರಾಲುವಿನಲ್ಲಿ ಬಂಧಿಸಿ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾಮಿಶ್ರಾ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕ ಸಿ.ಎಸ್. ದಿವಾಕರ್, ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ, ಶಿವನಗೌಡ ಜಿ. ಪಾಟೀಲ್ (ಪಿ.ಎಸ್.ಐ. ಅಪರಾಧ) ಸಿಬ್ಬಂದಿಗಳಾದ ರವಿಕುಮಾರ್, ಮಂಜುನಾಥ್, ಸೋಮಶೇಖರ್, ಸಜ್ಜನ್, ಚಾಲಕರಾದ ಪ್ರವೀಣ್ ಕುಮಾರ್ ಇವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.