ಮಡಿಕೇರಿ, ನ. 1: ಕಾವೇರಿಯ ಉಗಮ ಸ್ಥಳ ತಲಕಾವೇರಿ ಕ್ಷೇತ್ರದಲ್ಲಿನ ಸಮಸ್ಯೆಗಳು, ಕೇಳಿ ಬರುತ್ತಿರುವ ಗೊಂದಲಮಯ ಹೇಳಿಕೆಗಳ ಕುರಿತು; ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಇತ್ಯರ್ಥಕ್ಕೆ ಪ್ರಯತ್ನಿಸುವುದಾಗಿ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭರವಸೆಯ ನುಡಿಯಾಡಿದ್ದಾರೆ. ಇಂದು ದಂಪತಿ ಸಮೇತ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಧಾವಿಸಿ ಪೂಜಾ ಕೈಂಕರ್ಯ ನೆರವೇರಿಸಿದ ಸಚಿವರು, ‘ಶಕ್ತಿ’ ಅಭಿಪ್ರಾಯ ಬಯಸಿದಾಗ ಈ ಪ್ರತಿಕ್ರಿಯೆ ನೀಡಿದರು.

ತುಲಾ ಸಂಕ್ರಮಣ ತೀರ್ಥೋದ್ಭವದಂದು ಪತ್ನಿ ಶೈಲಜಾ ಸಹಿತ ಕುಟುಂಬದೊಂದಿಗೆ ಕಾವೇರಿ ಮಾತೆ ಹಾಗೂ ಭಗಂಡೇಶ್ವರ ದೇವರ ದರ್ಶನಕ್ಕೆ ಹಂಬಲಿಸಿದ್ದು; ಮಾಧ್ಯಮಗಳ ವಕ್ರದೃಷ್ಟಿಗೆ ಗುರಿಯಾಗದಿರಲೆಂದು ಇಂದು ಕ್ಷೇತ್ರಕ್ಕೆ ಕುಟುಂಬವನ್ನು ಕರೆದೊಯ್ಯುತ್ತಿರುವುದಾಗಿಯೂ ಸಚಿವರು ಹಾಸ್ಯ ಚಟಾಕಿ ಹಾರಿಸಿದರು. ತಾಯಿ ಕಾವೇರಿಯು ನೆಲೆಸಿರುವ ನಂಬಿಕೆಯೊಂದಿಗೆ ನಾಡಿನ ಒಳಿತಿಗಾಗಿ ಪ್ರಾರ್ಥಿಸುವುದರೊಂದಿಗೆ ಜಾಗತಿಕ ಕೊರೊನಾ ತೊಲಗಲೆಂದು ಬೇಡುವುದಾಗಿ ಅವರು ನುಡಿದರು.

ಕೊಡಗಿಗೆ ಸಚಿವ ಸ್ಥಾನಕ್ಕೆ ಪ್ರಾರ್ಥನೆ: ಉಪ ಚುನಾವಣೆ ಬಳಿಕ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆ ಯಲಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಮಾತಿದೆ. ಈ ವೇಳೆ ಕೊಡಗಿನವರಾಗಿರುವ ಎಂ.ಪಿ. ಅಪ್ಪಚ್ಚು ರಂಜನ್ ಅಥವಾ ಕೆ.ಜಿ. ಬೋಪಯ್ಯ ಯಾರಿಗಾದರೂ ಮಂತ್ರಿ ಪದವಿ ಸಿಗಬೇಕೆಂದು ತಾವೂ ಕೂಡ ಕಾವೇರಿ ಮಾತೆ ಸಹಿತ ಎಲ್ಲ ದೇವರಿಗೂ ಪ್ರಾರ್ಥಿಸುವುದಾಗಿ ಸಚಿವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಎಂತಹ ಪರಿಸ್ಥಿತಿಯಲ್ಲಿಯೂ ರಾಜ್ಯ ಸರಕಾರ ಕೊಡಗನ್ನು ಮರೆಯದು ಎಂದು ಮಾರ್ನುಡಿದ ಅವರು, ಸದಾ ಕೊಡಗಿನ ಜನತೆಯೊಂದಿಗೆ ಸಮಗ್ರವಾಗಿ ಉತ್ತರ ಪ್ರಾಂತದ ಅಭಿವೃದ್ಧಿಗೆ ಗಮನ ಹರಿಸಲಿದ್ದು, ಕಲ್ಯಾಣ ಕರ್ನಾಟಕದ ಕನಸು ಸಾಕಾರಗೊಳಿಸುವುದಾಗಿ ಆಶ್ವಾಸನೆಯ ನುಡಿಯಾಡಿದರು.