ಮಡಿಕೇರಿ, ನ. 1: ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡಲು ಅರ್ಪಿಸಿ ಕೊಳ್ಳುತ್ತೇವೆ ಮತ್ತು ದೇಶ ಬಾಂಧವರಲ್ಲಿ ಸಂದೇಶವನ್ನು ಸಾರಲು ಶ್ರಮಿಸುತ್ತೇನೆ ಎಂದು ಪ್ರತಿಜ್ಞೆ ಮಾಡಲಾಯಿತು.
ರಾಷ್ಟ್ರದ ಪ್ರಥಮ ಗೃಹ ಸಚಿವರಾದ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿ ಕಾಪಾಡುತ್ತೇನೆ. ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ತಮ್ಮದೇ ಆದ ಕೊಡುಗೆ ನೀಡುತ್ತೇನೆ ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ತಹಶೀಲ್ದಾರ್ ಮಹೇಶ್, ನಾನಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.
ಪೊಲೀಸರಿಂದ ಕವಾಯತು
ಸರದಾರ್ ವಲ್ಲಭಬಾಯ್ ಪಟೇಲ್ರವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ‘ರಾಷ್ಟ್ರೀಯ ಏಕತಾ ದಿನದ’ದ ಪ್ರಯುಕ್ತ ಜಿಲ್ಲಾ ಪೊಲೀಸ್ ವತಿಯಿಂದ ಮಡಿಕೇರಿಯ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕವಾಯತು ನಡೆಸಿ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ ಸ್ವೀಕರಿಸಲಾಯಿತು. ಈ ಸಂದರ್ಭ ಪೊಲೀಸ್, ಅರಣ್ಯ, ಗೃಹರಕ್ಷಕ ದಳದ ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.