ಮಡಿಕೇರಿ, ಅ. 31: ಕರ್ನಾಟಕ ತೋಟಗಾರಿಕಾ ಉತ್ಪನ್ನಗಳ ಸಹಕಾರ ಮತ್ತು ಮಾರಾಟ ಮಂಡಲದ ಅಧೀನದಲ್ಲಿರುವ ಕೊಡಗು ಜಿಲ್ಲಾ ಹಾಪ್ ಕಾಮ್ಸ್‍ಗೆ ಇದೇ ನವೆಂಬರ್ 11 ರಂದು ಚುನಾವಣೆ ಘೋಷಿಸಲ್ಪಟ್ಟಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಒಟ್ಟು ಆಡಳಿತ ಮಂಡಳಿಯೊಳಗೆ 17 ನಿರ್ದೇಶಕರುಗಳ ಪೈಕಿ ನಾಲ್ವರು ಅಧಿಕಾರಿಗಳು ಹಾಗೂ 13 ಮಂದಿ ಚುನಾಯಿತ ಪ್ರತಿನಿಧಿಗಳು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಕೊಡಗು ಹಾಪ್‍ಕಾಮ್ಸ್ ಪ್ರಾರಂಭದೊಂದಿಗೆ ಕಳೆದ ಒಂದು ದಶಕದಿಂದ ನಾಪೋಕ್ಲುವಿನ ಬಿ.ಎ. ರಮೇಶ್ ಚಂಗಪ್ಪ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಕಳೆದ ಆಗಸ್ಟ್‍ನಲ್ಲಿ ಇವರ ಅಧಿಕಾರ ಅವಧಿ ಮುಕ್ತಾಯದೊಂದಿಗೆ ಆಡಳಿತಾಧಿಕಾರಿ ನೇಮಕಗೊಂಡು, ಕೊರೊನಾ ಹಿನ್ನೆಲೆ ಇದುವರೆಗೆ ಚುನಾವಣಾ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು. ಪ್ರಸಕ್ತ ಸಹಕಾರ ಇಲಾಖೆಯ (ಮೊದಲ ಪುಟದಿಂದ) ಪಿ.ಬಿ. ಮೋಹನ್ ಅವರು ಚುನಾವಣಾಧಿಕಾರಿಯಾಗಿದ್ದಾರೆ. ಎರಡು ನಾಮಪತ್ರ: ಮೊದಲನೆಯ ದಿನವಾದ ಇಂದು ವೀರಾಜಪೇಟೆ ತಾಲೂಕಿನಿಂದ ಸುವಿನ್ ಗಣಪತಿ ಹಾಗೂ ಮಲ್ಲಂಡ ಮಧು ದೇವಯ್ಯ ನಾಮಪತ್ರ ಸಲ್ಲಿಸಿದ್ದಾರೆ. ಆಡಳಿತ ಮಂಡಳಿಯ 13 ಸ್ಥಾನಗಳ ಪೈಕಿ ಸಾಮಾನ್ಯ ಕ್ಷೇತ್ರ 7, ಮಹಿಳಾ 2, ಹಿಂದುಳಿದ ವರ್ಗ ‘ಎ’ ಮತ್ತು ‘ಬಿ’ ತಲಾ ಒಂದೊಂದು ಸ್ಥಾನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಲಾ ಒಂದೊಂದು ಸ್ಥಾನಗಳಿಗೆ ಸ್ಪರ್ಧೆ ನಡೆಯಲಿದೆ.

ನ. 11 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದ್ದು, ನ. 3 ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಚುನಾವಣೆಯ ದಿನವೇ ಸಂಜೆ 4 ಗಂಟೆಯ ಬಳಿಕ ಮತ ಎಣಿಕೆ ನಡೆಯಲಿದೆ. ಇಲ್ಲಿನ ತೋಟಗಾರಿಕಾ ಇಲಾಖೆ ಕಚೇರಿ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ಜರುಗಲಿದೆ.

ಸ್ವಂತ ಕಟ್ಟಡ: ಇದುವರೆಗೂ ತೋಟಗಾರಿಕಾ ಇಲಾಖೆಯ ಕಟ್ಟಡದ ಒಂದು ಭಾಗದಲ್ಲಿ ನಡೆದುಕೊಂಡು ಬಂದಿರುವ ಈ ಸಂಸ್ಥೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ನಿಕಟಪೂರ್ವ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಅವರುಗಳ ಪ್ರಯತ್ನದಿಂದ ನಗರದ ಹೃದಯಭಾಗದಲ್ಲಿರುವ ಅಂಚೆ ಕಚೇರಿ ಎದುರು ಸ್ವಂತ ಕಟ್ಟಡ ತಲೆಎತ್ತುವಂತಾಗಿದೆ.

ಮಂಡಲ ನೆರವು: ಕರ್ನಾಟಕ ತೋಟಗಾರಿಕಾ ಮಹಾಮಂಡಲದ ನೆರವಿನೊಂದಿಗೆ ಅಂದಾಜು ರೂ. 1.30 ಕೋಟಿ ಯೋಜನೆಯ ಈ ಸ್ವಂತ ಕಟ್ಟಡವು 36 ಸೆಂಟ್ ಜಾಗದಲ್ಲಿ ತಲೆಯೆತ್ತುವುದರೊಂದಿಗೆ ಇನ್ನಷ್ಟೇ ಉದ್ಘಾಟನೆಗೊಳ್ಳಬೇಕಿದೆ. ಮೂಲಗಳ ಪ್ರಕಾರ ಪ್ರಸಕ್ತ ಚುನಾವಣೆ

ಬಳಿಕ ನವೆಂಬರ್ ಅಂತ್ಯದೊಳಗೆ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದ್ದು, ಹಾಪ್ ಕಾಮ್ಸ್ ಚಟುವಟಿಕೆ ಸ್ವಂತ ನೆಲೆಯಲ್ಲಿ ಕಾರ್ಯಾರಂಭ

ಮಾಡಲಿದೆ.

ಆದಾಯ ಕುಂಠಿತ: ಕಳೆದ ಒಂದು ದಶಕದಿಂದ ಕೊಡಗು ಹಾಪ್ ಕಾಮ್ಸ್ ಆರ್ಥಿಕವಾಗಿ ಸುಧಾರಣೆಯೊಂದಿಗೆ ಸರಾಸರಿ ರೂ. 2.50 ಲಕ್ಷ ಲಾಭದಲ್ಲಿದ್ದರೆ, ಪ್ರಸಕ್ತ ಕೊರೊನಾ ಸಂಕಷ್ಟದಿಂದ ವಹಿವಾಟು ಕುಸಿದು ನಿರೀಕ್ಷಿತ ಲಾಭ ಸಾಧ್ಯವಾಗಿಲ್ಲವೆನ್ನಲಾಗಿದೆ.