ಕಾವೇರಿ ಕರ್ನಾಟಕದ ಸಿರಿದೇವಿ. ಕೊಡಗಿನ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬ್ರಹ್ಮಗಿರಿ ಬೆಟ್ಟದ ಮಡಿಲಲ್ಲಿ ತಲಕಾವೇರಿ ಕ್ಷೇತ್ರ; ಅದೇ ಕಾವೇರಿಯ ಉಗಮಸ್ಥಾನ. ಅಲ್ಲಿ ಪುಟ್ಟದಾದ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ನದಿಯಾಗಿ ಹುಟ್ಟಿ ಹರಿಯ ಹೊರಡುತ್ತಾಳೆ. ತಲಕಾವೇರಿಯಿಂದ ಕೆಳಗೆ ಬೆಟ್ಟದಿಂದ ಇಳಿದು, ಕಾಡುಗಳನ್ನು ದಾಟಿ ಬಯಲು ಪ್ರದೇಶವನ್ನು ಸೇರಿ ಕರ್ನಾಟಕದಲ್ಲಿ ಬಹುದೂರ ಹರಿಯುವಳು ಕಾವೇರಿ. ಮುಂದೆ ತಮಿಳುನಾಡಿನಲ್ಲಿ ಸಾಗಿ ಕೊನೆಗೆ ಬಂಗಾಳ ಸಮುದ್ರದಲ್ಲಿ ಸಂಗಮವಾಗುತ್ತಾಳೆ.

ಜಗದಾದಿ ಶಕ್ತಿಯ ಅಂಶದಿಂದ ರೂಪುಗೊಂಡು ಇಳೆಯಲ್ಲಿ ಮನಕುಲೋನ್ನತಿಗಾಗಿ ನದಿಯಾಗಿ ಮೈತಳೆದು ಹರಿದಿರುವ ಕಾವೇರಿಯು ಶುಭದಾತೆಯಾದ ಮಹಾಮಾತೆಯಾಗಿದ್ದಾಳೆ. ಈಕೆಯು ಆದಿಶಕ್ತಿಯ ಅವತಾರವೆಂದೂ ಅನಾದಿಕಾಲದಿಂದಲೂ ಆರಾಧಿಸುತ್ತಾ ಬಂದಿರುವವರ ಸಂಖ್ಯೆ ಅಪಾರವಾದುದಾಗಿದೆ. ಜಗನ್ಮಂಗಳ ದೇವತೆಯಾಗಿ ಭವಪಾಶ ನಿವಾರಿಣಿಯಾಗಿ, ಭಗವತಿಯಾಗಿ ಕಾವೇರಿ ದೇವಿಯನ್ನು ಆಧ್ಯಾತ್ಮಿಕ ಸಾಧನೆಯ ಮೂಲಕ ಕಂಡುಕೊಂಡು ಭಕ್ತ ಸಮೂಹ ಧನ್ಯತೆ ಪಡೆಯುತ್ತದೆ.

ಕಾವೇರಿಯು ಭಾರತದ ಪವಿತ್ರ ಪ್ರಸಿದ್ಧಿಯ ಸಪ್ತನದಿ ದೇವತೆಗಳಲ್ಲಿ ಒಬ್ಬಳಾಗಿದ್ದು, ವೈದಿಕ ಕಾಲದಿಂದ ಆಧುನಿಕ ಕಾಲದವರೆಗೂ ಭಕ್ತರು ಪ್ರತಿದಿನವೂ ಪ್ರಾತಃಕಾಲ ಸ್ನಾನ ಪೂಜಾದಿಗಳ ಸಂದರ್ಭದಲ್ಲಿ

‘‘ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ||

ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||

ಅಂದರೆ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು ಮತ್ತು ಕಾವೇರಿ|| ಜಲದೇವತೆಗಳು ಇಲ್ಲಿ ಸಾನ್ನಿಧ್ಯವನ್ನುಂಟು ಮಾಡುವಂತಾಗಲಿ ಎಂಬದಾಗಿ ಸ್ಮರಿಸಿ ಪ್ರಾರ್ಥಿಸುತ್ತಾರೆ. ಆದುದರಿಂದಲೇ ಅವಳು ಸರ್ವಜನ ಆದರಣೀಯಳಾಗಿದ್ದಾಳೆ. ನಮ್ಮ ಬದುಕಿನಲ್ಲೂ ನಾವು ಜಾತಿ, ಮತ, ಪಂಗಡ, ಭಾಷೆಗಳ ಭೇದ ದ್ವೇಷಗಳನ್ನು ಬಿಟ್ಟು ಬಾಳಿದರೆ ಅದರಿಂದ ನಮ್ಮ ವೈಯಕ್ತಿಕ ಬದುಕು ಹಾಗೂ ಸಾಮಾಜಿಕ ಜೀವನ ಸುಖಮಯವೂ, ಸುಭದ್ರವೂ ಆಗುವುದರಲ್ಲಿ ಸಂದೇಹವಿಲ್ಲ ಎಂಬದನ್ನು ಸಾಂಕೇತಿಕವಾಗಿ ತನ್ನ ಜೀವಿತದ ಮೂಲಕ ಜಗತ್ತಿಗೆ ಸಾರಿದ್ದಾಳೆ.

ಕೊಡಗಿನ ಗೌಡ ಸಮುದಾಯದವರು ಮಾತೆ ಕಾವೇರಿ ಬಗ್ಗೆ ಅನನ್ಯ ಭಕ್ತಿಭಾವ ಹೊಂದಿದ್ದು, ಆರಾಧಿಸಿಕೊಂಡು ಬಂದಿದ್ದಾರೆ. ಕೊಡಗಿನ ಗೌಡ ಸಮುದಾಯದಲ್ಲಿ ವಿವಾಹಾನಂತರ ವಧೂ-ವರರು, ಮಾತೆ ಕಾವೇರಿಯ ದರ್ಶನ ಮಾಡುವ ಸಂಪ್ರದಾಯ ರೂಢಿಯಲ್ಲಿದೆ.

ಸಂಗಮದ ತೀರ್ಥಸ್ನಾನ : ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿ, ಭಾಗಮಂಡಲ ಕೊಡಗು ಗೌಡರಿಗೆ ಪುಣ್ಯಕ್ಷೇತ್ರ, ನವ ದಂಪತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮದುವೆಯಾದ ಮೊದಲ ವರ್ಷ ಭಾಗಮಂಡಲಕ್ಕೆ ಹೋಗಿ ಅಲ್ಲಿಯ ತ್ರಿವೇಣಿ ಸಂಗಮದಲ್ಲಿ (ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ಎಂಬ ನದಿಗಳು ಸೇರುವ ಸ್ಥಳ) ಕೈ, ಕೈ ಹಿಡಿದು ಜೊತೆಯಲ್ಲಿ ನೀರಿನಲ್ಲಿ ಮುಳುಗಿ ಸ್ನಾನ ಮಾಡಿ ನಂತರ ದೇವರ ಪೂಜಾಕಾರ್ಯಗಳನ್ನು ಮುಗಿಸುತ್ತಾರೆ. ಆನಂತರ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಗೆ ಹೋಗಿ ಅಲ್ಲಿಯೂ ಸ್ನಾನ ಮಾಡಿ ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಮನೆಗೂ ತೆಗೆದು ಕೊಂಡು ಹಿಂತಿರುಗುವರು.

ಕಾವೇರಿ ಸಂಕ್ರಮಣ : ಕೊಡಗು ಗೌಡರು ತುಲಾ ಸಂಕ್ರಮಣವನ್ನು ಕಾವೇರಿ ಸಂಕ್ರಮಣವೆಂದು ಆಚರಿಸು ತ್ತಾರೆ. ಈ ಹಬ್ಬವು ಅಕ್ಟೋಬರ್ ತಿಂಗಳ 17 ರಂದು ಬರುತ್ತದೆ. ಅಂದು ನಿಶ್ಚಿತ ವೇಳೆಯಲ್ಲಿ ತಲಕಾವೇರಿಯಲ್ಲಿ ಕಾವೇರಿಯು ಹುಟ್ಟಿದ ಕಡೆ ತೀರ್ಥೋದ್ಭವಾಗುತ್ತದೆ. ಕೊಡಗು ಗೌಡರ ಮನೆಗಳಲ್ಲಿ ಆ ದಿನದ ಹಿಂದಿನ ದಿನ ಗದ್ದೆ ತೋಟಗಳನ್ನು ಶೃಂಗರಿಸುತ್ತಾರೆ. ಆ ದಿನ ವಿಶೇಷವಾಗಿ ಗದ್ದೆ, ತೋಟ, ಬಾವಿಯ ದಡದಲ್ಲಿ ಮನೆಯ ಮುಂದುಗಡೆ ಬೆತ್ತು ಎಂಬ ಮರದ ಕೋಲನ್ನು ನೆಟ್ಟು ಬೆತ್ತು ಬಳ್ಳಿ ಎಂಬ ಬಳ್ಳಿಯ ಎಲೆಯಿಂದ ಅಲಂಕರಿಸುತ್ತಾರೆ. ಮನೆಯ ಗದ್ದೆಯ ಏಕಲಿನಲ್ಲಿ ಏಕಲು ಎಂದರೆ ಭತ್ತವನ್ನು ಬಿತ್ತು ಪೈರುಗಳನ್ನು ಬೆಳೆಸುವ (ಅಗೆ) ಗದ್ದೆ ಆ ಮುಖ್ಯ ಗದ್ದೆಯಲ್ಲಿ ಬೆತ್ತಿನ ಕೋಲಿನ ಗುಂಪು ನೆಟ್ಟು ಅದಕ್ಕೆ ಬೆತ್ತುಬಳ್ಳಿಗಳನ್ನು ಸುತ್ತಿ, ಹೂಗಳಿಂದಲೂ ಶೃಂಗರಿಸುತ್ತಾರೆ. ಕೊಡಗು ಗೌಡರ ಮನೆಯಲ್ಲಿ ಆ ದಿನ ಹುಳಿ ದೋಸೆಯನ್ನು ಮಾಡುತ್ತಾರೆ. ಆ ದೋಸೆಗೆ ತುಪ್ಪ ಸಕ್ಕರೆ ತೆಂಗಿನಕಾಯಿತುರಿಯನ್ನು ಹಾಕಿ ಏಕಲಿನಲ್ಲಿ ನೆಟ್ಟ ಬೆತ್ತಿನ ಮೇಲೆ ಇಡುತ್ತಾರೆ. ಬೆತ್ತಿನ ಮೇಲೆ ಬಾಳೆ ಎಲೆಯನ್ನು ಇಟ್ಟು ತೆಂಗಿನಕಾಯಿ ಒಡೆದು ಗಂಧದ ಕಡ್ಡಿಯನ್ನು ಹಚ್ಚಿಡುತ್ತಾರೆ. ಇವರು ಕಾವೇರಿ ಸಂಕ್ರಮಣವನ್ನು ಎರಡು ದಿನ ಆಚರಿಸುವರು. ಬೆತ್ತು ಹಾಕಿದ ದಿನ ಸಾಯಂಕಾಲ ಪ್ರತೀ ಮನೆಯಲ್ಲಿ ಕಣಿಪೂಜೆ ಮಾಡಲು ಹೂವುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ತೀರ್ಥೋದ್ಭವವಾದ ಮರುದಿನ ಬೆಳಗ್ಗೆ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟು ಮನೆಯನ್ನು ಶುದ್ಧಗೊಳಿಸುತ್ತಾರೆ. ಮನೆಯ ಹಿರಿಯ ಮುತ್ತೈದೆ ನೆಲ್ಲಕ್ಕಿಯಡಿಯಲ್ಲಿ ದೀಪವನ್ನು ಬೆಳಗಿ ರೇಷ್ಮೆ ವಸ್ತ್ರವಿಟ್ಟು ತರಕಾರಿಯೊಂದಕ್ಕೆ ತಲೆ, ಕೈ, ಕಾಲು ಮಾಡಿ ಹೂವಿನಿಂದ ಶೃಂಗರಿಸಿ ಕಾವೇರಿ ಮಾತೆಯ ಪ್ರತಿರೂಪ ಮಾಡುತ್ತಾಳೆ.

ಇದನ್ನು ಆಭರಣಗಳಿಂದ ಶೃಂಗರಿಸಿ ಪೂಜಿಸುತ್ತಾರೆ. ಇದೇ ಕಣಿಪೂಜೆ. ಪೂಜೆಗೆ ಮೂರು ಎಲೆ, ಮೂರು ಅಡಿಕೆ ಇಡುತ್ತಾರೆ. ಈ ಮೂರ್ತಿಯನ್ನು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟು ಮನೆಯವರೆಲ್ಲರು ಅಕ್ಕಿ ತೆಗೆದುಕೊಂಡು ದೀಪಕ್ಕೆ ಪ್ರೋಕ್ಷಿಸಿ ಮೂರ್ತಿಗೆ ನಮಸ್ಕರಿಸುತ್ತಾರೆ. ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಕಣಿಪೂಜೆಯಾದ ನಂತರ ಮುತ್ತೈದೆಯೊಬ್ಬಳು ಬಾವಿ ಬಳಿಗೆ ಹೋಗಿ ಗಂಗಾ ಪೂಜೆ ಮಾಡುತ್ತಾಳೆ.

ಆ ದಿನ ಕೊಡಗು ಗೌಡರ ಮನೆಯಿಂದ ಒಬ್ಬನಾದರೂ ಕಾವೇರಿ ಉದ್ಭವಸ್ಥಾನ ತಲಕಾವೇರಿ-ಭಾಗಮಂಡಲಕ್ಕೆ ಹೋಗಿ ಸ್ನಾನ ಮಾಡಿ ಪುಣ್ಯತೀರ್ಥವನ್ನು ತರುತ್ತಾರೆ. ಮನೆಯಲ್ಲಿ ಹಿರಿಯರು ಸತ್ತರೆ ದೀಕ್ಷೆ ನಿಂತವರು, ಹೆಂಡತಿ ಸತ್ತರೆ ಗಂಡನು, ತಂದೆ ಸತ್ತರೆ ಮಕ್ಕಳೂ ಭಾಗಮಂಡಲಕ್ಕೆ ಹೋಗಿ ಪುಣ್ಯಸ್ನಾನ ಮಾಡಿ ಸತ್ತವರಿಗೆ ಪಿಂಡಹಾಕಿ ತೀರ್ಥ ಪ್ರಸಾದವನ್ನು ಮನೆಯವರಿಗೂ, ನೆರೆಮನೆಯವರಿಗೂ, ಹಂಚುತ್ತಾರೆ. ಭಾಗಮಂಡಲ ತಲಕಾವೇರಿಗೆ ಹೋಗಲು ಸಾಧ್ಯವಾಗ ದವರು ಬಲಮುರಿ ದೇವಸ್ಥಾನಕ್ಕೆ ಅಥವಾ ಗುಹ್ಯದ ಅಗಸ್ತ್ಯೇಶ್ವರ ದೇವಾಲಯಕ್ಕೆ ಹೋಗಿ ಸ್ನಾನ ಮಾಡಿ ಬರುತ್ತಾರೆ. ಕಾವೇರಿ ತೀರ್ಥವನ್ನು ಮನೆಗೆ ತರುವಾಗ ಎಲ್ಲರೂ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ ತೀರ್ಥ ಸ್ವೀಕರಿಸುತ್ತಾರೆ., ಆ ದಿನ ಮಾಂಸಾಹಾರವನ್ನು ಸ್ವೀಕರಿಸುವುದಿಲ್ಲ. ಶೃಂಗರಿಸಿದ ಕಾವೇರಿ ವಿಗ್ರಹವನ್ನು ಒಂದು ವಾರದ ಅವಧಿ ಮುಗಿದ ಮೇಲೆ ಹತ್ತಿರದ ಹೊಳೆಯಲ್ಲಿ ಇಲ್ಲವೆ ಹಾಲು ಬರುವ ಮರದ ಅಡಿಯಲ್ಲಿ ವಿಸರ್ಜಿಸುವರು.

ಯಾತ್ರೆಗಳು : ಧಾರ್ಮಿಕ ವಿಧಿಯ ಅಂಗವಾಗಿ ಕೊಡಗು ಗೌಡರು ತಮ್ಮ ಇಷ್ಟ ದೇವರುಗಳ ಊರುಗಳಿಗೆ ಯಾತ್ರೆ ಹೋಗುತ್ತಾರೆ. ಮತ್ತೆ ಕೆಲವರು ತಮ್ಮ ಕಷ್ಟಕಾಲದಲ್ಲಿ ಹರಕೆ ಹೊತ್ತಿದ್ದು ಅವುಗಳನ್ನು ಪೂರೈಸಲು ಕೂಡ ಯಾತ್ರೆ ಹೋಗುತ್ತಾರೆ. ಕೊಡಗಿನೊಳಗೆ ಭಾಗಮಂಡಲ, ತಲಕಾವೇರಿ, ಬಲಮುರಿ, ಇರ್ಪು, ಪಾಡಿ ಇಗ್ಗುತ್ತಪ್ಪ, ಬೈರಂಬಾಡದ ಸುಬ್ರಹ್ಮಣ್ಯ ದೇಗುಲ, ಪಾಲೂರು, ಯವಕಪಾಡಿ, ಕಕ್ಕಬೆ, ಕುಟ್ಟ ಮೊದಲಾದವುಗಳು ಯಾತ್ರಾ ಸ್ಥಳಗಳು. ಇನ್ನು ಜಿಲ್ಲೆಯ ಹೊರಗೆ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಕಟೀಲು, ಕೊಲ್ಲೂರು, ಉಡುಪಿ, ಗೋಕರ್ಣ, ಮುರ್ಡೇಶ್ವರ, ತಿರುಪತಿ, ಪರಶಿನಕಡಾವು ಮುಂತಾದ ಕಡೆಗೆ ಹೋಗುತ್ತಾರೆ.

ಪಿಂಡ ಪ್ರದಾನ : ಕೊಡಗು ಗೌಡ ಸಮುದಾಯದಲ್ಲಿ ಸಾವುಗಳಾದಾಗ ಮೃತನಿಗೆ ದೀಕ್ಷೆಗೆ ನಿಂತವನು ಶುದ್ಧದ ದಿನದಂದು ಗಡ್ಡ, ಮೀಸೆ, ತಲೆಕೂದಲನ್ನು ಬೋಳಿಸಿದ ನಂತರ ಪಿಂಡ ಹಾಕುವವರೆಗೆ ಗಡ್ಡ, ಮೀಸೆ, ತಲೆಕೂದಲನ್ನು ತೆಗೆಯುವುದಿಲ್ಲ. ಪಿಂಡ ಹಾಕುವುದೆಂದರೆ ಸತ್ತವನಿಗೆ ಮೋಕ್ಷ ಸಿಗಲಿ ಎಂದು ಮಾಡುವ ಕ್ರಮ. ಕೊಡಗು ಗೌಡರು ಭಾಗಮಂಡಲದಲ್ಲಿ ಪಿಂಡ ಹಾಕುತ್ತಾರೆ. ಭಾಗಮಂಡಲದ ತ್ರಿವೇಣಿ ಸಂಗಮದ ದಡದಲ್ಲಿ ಪಿಂಡದ ಸಾಮಾನುಗಳನ್ನು ಮಾರುವ ಸ್ಥಳಗಳಿರುತ್ತವೆ ಮತ್ತು ತಲೆಕೂದಲು ಗಡ್ಡ, ಮೀಸೆ ಬೋಳಿಸಲು ಕ್ಷೌರಿಕರಿರುತ್ತಾರೆ. ಮೊದಲು ಸಂಗಮದಲ್ಲಿ ಮುಳುಗಿ ಸ್ನಾನ ಮಾಡಿದ ನಂತರ ಕ್ಷೌರಿಕನಿಂದ ತಲೆಗೂದಲು, ಗಡ್ಡ, ಮೀಸೆ ಬೋಳಿಸಿ ಕಾಣಿಕೆಕೊಟ್ಟು ಪುನಃ ಸ್ನಾನ ಮಾಡುವರು. ನಂತರ ಪಿಂಡದ ಸಾಮಾನು ಮಾರುವ ಸ್ಥಳಕ್ಕೆ ಹೋಗಿ ಅಲ್ಲಿ ಪಿಂಡದ ಸಾಮಾನಿರುವ ಎಲೆಯನ್ನು ಖರೀದಿಸಿ ನೇರವಾಗಿ ನದಿಯ ಆಚೆ ಬದಿಯಲ್ಲಿ ಕುಳಿತಿರತಕ್ಕ ಬ್ರಾಹ್ಮಣರ ಹಸ್ತ ಕೊಡುವರು. ನಂತರ ಬ್ರಾಹ್ಮಣರ ನಿರ್ದೇಶನದಂತೆ ಕೆಲವು ಮಂತ್ರೋಚ್ಚಾರಗಳನ್ನು ಹೇಳಿದ ನಂತರ ಕೈಯ ಬೆರಳಿಗೆ ದರ್ಬೆಯನ್ನು ಕಟ್ಟಿ ಪಿಂಡದ ಎಲೆಗೆ ನೀರು ಬಿಟ್ಟು ಪಿಂಡ ಪ್ರದಾನ ಮಾಡಬೇಕು. ಪಿಂಡದ ಎಲೆಯನ್ನು ಸಂಗಮದಲ್ಲಿ ಬಿಡಬೇಕು. ಪಿಂಡದ ಎಲೆಯನ್ನು ಸಂಗಮದಲ್ಲಿ ಬಿಟ್ಟು ನೀರಿನಲ್ಲಿ ಮುಳುಗಿ ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ತೊಟ್ಟು ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ಮೊದಲೇ ತಂದ ಹಣ್ಣು ಕಾಯಿ ಫಲಾಮೃತದೊಂದಿಗೆ ದೇವಸ್ಥಾನದ ಪೂಜೆಗೆ ಹೋಗಬೇಕು. ದೇವರಿಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಮನೆಗೂ ತಂದು ಮನೆಯವರಿಗೆ ಕೊಡುವರು.

-ಡಾ. ಕೋರನ ಸರಸ್ವತಿ ಪ್ರಕಾಶ್, ಸಹಪ್ರಾಧ್ಯಾಪಕರು

ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು

ಮಡಿಕೇರಿ.