ಮಡಿಕೇರಿ, ಅ. 31: 2 ವರ್ಷಗಳ ನಂತರ ಮಾನಸಿಕ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರು ಕುಟುಂಬ ದೊಂದಿಗೆ ಒಂದಾದ ಸಂತಸದ ಘಟನೆÀ ಮಡಿಕೇರಿಯಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಕೆ.ಆರ್ ನಗರದ ಸಾಲಿಗ್ರಾಮ ಗ್ರಾಮದಲ್ಲಿ ನೆಲೆಸಿರುವ ಕುಟುಂಬದೊಂದಿಗೆ ಮಹಿಳೆ ಪಾರ್ವತಿ ಇದೀಗ ಒಂದಾಗಿ ದ್ದಾರೆ. 2018 ರಲ್ಲಿ ಪಾರ್ವತಿ ಅವರು ಊರೂರು ಅಲೆದಾಡಿ ಮೂರ್ನಾಡು ತಲುಪಿದ್ದರು. ಇದನ್ನು ಗಮನಿಸಿದ ಆಗಿನ ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿ ಅವರನ್ನು ವಿಚಾರಿಸಿದಾಗ ಅವರು ಮಾನಸಿಕ ವಾಗಿ ಅನಾರೋಗ್ಯಕ್ಕೆ ಈಡಾಗಿದ್ದುದು ಗಮನಕ್ಕೆ ಬಂದಿತ್ತು. ಮಡಿಕೇರಿಯ ತ್ಯಾಗರಾಜ ಕಾಲೋನಿಯ ತನಲ್ ವೃದ್ಧಾಶ್ರಮಕ್ಕೆ ಪಾರ್ವತಿ ಅವರನ್ನು ಪೊಲೀಸರು ದಾಖಲಿಸಿದ್ದರು. ತನಲ್ ವೃದ್ಧಾಶ್ರಮದ ಅಧ್ಯಕ್ಷ ಮಹಮದ್ ಅವರ ಮಾರ್ಗದರ್ಶನದಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ

ಅ. 30 ರಂದು ಅವರ ಕುಟುಂಬದ ವರಿಗೆ ಪಾರ್ವತಿ ಅವರು ಮಡಿಕೇರಿ ಯಲ್ಲಿ ರುವ ಮಾಹಿತಿ ದೊರೆತ ಮೇರೆಗೆ ಮಡಿಕೇರಿಗೆ ಆಗಮಿಸಿದ್ದು ಸ್ವಗ್ರಾಮಕ್ಕೆ ಕರೆದೊಯ್ದಿದ್ದಾರೆ.

2 ವರ್ಷಗಳಿಂದ ಪತ್ತೆಹಚ್ಚುವ ಕಾರ್ಯದಲ್ಲಿ ನಿರತ

2018ರಲ್ಲಿ ಪಾರ್ವತಿ ತನಲ್ ವೃದ್ಧಾಶ್ರಮಕ್ಕೆ ದಾಖಲಾದ ಬಳಿಕ ವೃದ್ಧಾಶ್ರಮದ ಸಿಬ್ಬಂದಿ ಅವರ ಹೆಸರು, ಮನೆ, ಊರಿನ ಬಗ್ಗೆ ವಿಚಾರಿಸಿದಾಗ ಗೊಂದಲದ ಉತ್ತರಗಳನ್ನು ಪಾರ್ವತಿ ನೀಡುತ್ತಿದ್ದರು. 5-6 ಹೆಸರು ಗಳನ್ನು ನೀಡುತ್ತಿದ್ದರು. ಒಂದೊಂದು ಬಾರಿ ಒಂದೊಂದು ಊರಿನ ಹೆಸರುಗಳನ್ನು ನೀಡುತ್ತಿದ್ದರು. ಅವರಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದರು. ಅವರು ನೀಡಿದ ಎಲ್ಲಾ ಊರುಗಳ ಹೆಸರು, ಸಂಬಂಧಿಕರ ಹೆಸರುಗಳನ್ನು ಹೊಂದಾಣಿಕೆ ಮಾಡಿ ಸಂಬಂಧಿಕರ ಪತ್ತೆಗಾಗಿ ವೃದ್ಧಾಶ್ರಮದ ಸಿಬ್ಬಂದಿ 2 ವರ್ಷ ಸತತ ಪ್ರಯತ್ನ ನಡೆಸಿದ್ದಾಗಿ ವ್ರದ್ಧಾಶ್ರಮದ ಅಧ್ಯಕ್ಷ ಮಹಮದ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಈ ಪ್ರಯತ್ನ ಸಫಲವಾಗಿದ್ದು ಕೆ.ಆರ್. ನಗರದ ಸಾಲಿಗ್ರಾಮದಲ್ಲಿ ಇವರ ಕುಟುಂಬವಿರುವುದು ಗೊತ್ತಾಗಿದೆ. ಈ ಹಿಂದೆ ಕುಟುಂಬ ದವರು ಪಾರ್ವತಿ ನಾಪತ್ತೆಯಾದ ಕುರಿತು ಸಾಲಿಗ್ರಾಮದಲ್ಲಿ ಪೊಲೀಸ್ ದೂರು ನೀಡಿದ್ದು ಅವರ ಪತ್ತೆಗಾಗಿ ನಿರಂತರ ಪ್ರಯತ್ನ ನಡೆಸಿದ್ದರು.

ಮಗಳಿಗಾಗಿ ಕೊರಗಿ ಮೃತಪಟ್ಟ ತಾಯಿ

ತನ್ನ ಮಗಳ ಆರೋಗ್ಯ ಸರಿಯಿಲ್ಲ ಎಂಬ ಚಿಂತೆಯಲ್ಲೇ ಬಳಲುತ್ತಿದ್ದ ಪಾರ್ವತಿ ಅವರ ತಾಯಿಗೆ ಆಕೆ ನಾಪತ್ತೆಯಾಗಿದ್ದು ಮತ್ತಷ್ಟು ದುಃಖ ತಂದಿತ್ತು. ಕುಟುಂಬದವರು ಪಾರ್ವತಿಯ ಪತ್ತೆಗಾಗಿ 2 ವರ್ಷಗಳ ಕಾಲ ಪ್ರಯತ್ನ ನಡೆಸುತ್ತಿದ್ದ ಅವಧಿಯಲ್ಲಿ ಮಗಳು ಮತ್ತೆ ಮನೆಗೆ ಬರಲಾರಳು ಎಂಬ ದುಃಖದಿಂದ ಕೊನೆಯುಸಿರೆಳೆದರು.

ಅಕ್ಕನ ಮಗನೆ ಅವರಿಗೂ ಪುತ್ರ

ಪಾರ್ವತಿ ಅವಿವಾಹಿತರಾದ ಕಾರಣ ತನ್ನ ಅಕ್ಕನ ಮಗ ಮಹೇಶ್ ಅನ್ನು ತನ್ನ ಮಗನಂತೆ ಕಾಣುತ್ತಾರೆ. ಪಾರ್ವತಿಯ ಪತ್ತೆಗಾಗಿ ಮಹೇಶ್ ಕುಟುಂಬವೇ ಪ್ರಯತ್ನ ಪಡುತ್ತಿದ್ದು ನಿನ್ನೆ ಮಡಿಕೇರಿಯಲ್ಲಿ ಪಾರ್ವತಿ ಈ ಕುಟುಂಬದೊಂದಿಗೆ ಒಂದಾದರು.

ತನಲ್‍ನಲ್ಲಿ 22 ಮಂದಿಗೆ ಚಿಕಿತ್ಸೆ

ಪ್ರಸ್ತುತ ತನಲ್ ವೃದ್ಧಾಶ್ರಮದಲ್ಲಿ 22 ಮಂದಿ ಸಂತ್ರಸ್ತರಿಗೆ ಆಶ್ರಯವಾಗಿದ್ದು, ಇವರುಗಳ ಆರೈಕೆಯಲ್ಲಿ ಸಿಬ್ಬಂದಿ ಸದಾ ತೊಡಗಿದ್ದಾರೆ. ಸಂತ್ರಸ್ತರ ಪೈಕಿ ಯಾರಾದರೂ ಮೃತರಾದಲ್ಲಿ ಅವರುಗಳ ಧರ್ಮದ ಪ್ರಕಾರವೇ ಶವ ಸಂಸ್ಕಾರ ನಡೆಸಲಾಗುತ್ತದೆ ಎಂದು ಮಹಮದ್ ಅವರು ತಿಳಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆಯಷ್ಟೆ ತಮ್ಮ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಉತ್ತರಪ್ರದೇಶದ ಮಹಿಳೆಯೋರ್ವಳ ಸಂಬಂಧಿಕರನ್ನು ಪತ್ತೆ ಹಚ್ಚಿ ಅವರನ್ನು ತಮ್ಮ ಊರಿಗೆ ಕಳುಹಿಸಿಕೊಡಲಾಗಿತ್ತು ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.