*ಗೋಣಿಕೊಪ್ಪಲು, ಅ. 31 : ಹುಲಿ ದಾಳಿಯಿಂದ ಹಸು ಪಾರಾಗಿ ಜೀವ ಉಳಿಸಿಕೊಂಡ ಘಟನೆ ತಿತಿಮತಿ ಸಮೀಪದ ಮೂಡಗದ್ದೆಯಲ್ಲಿ ಶುಕ್ರವಾರ ಸಂಜೆ ಜರುಗಿದೆ.

ಮೂಡಗದ್ದೆ ರಾಘವಯ್ಯ ಎಂಬವರು ಹಸುವನ್ನು ಮೇಯಿಸಿಕೊಂಡು ಬಂದು ಸಂಜೆ ವೇಳೆ ಮನೆ ಪಕ್ಕದಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಕೊಟ್ಟಿಗೆಯ ಜಾಡು ಹಿಡಿದು ನುಗ್ಗಿದ ಹುಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ದಾಳಿ ನಡೆಸಿದೆ. ಈ ವೇಳೆಯಲ್ಲಿ ಹಗ್ಗ ಕಿತ್ತುಕೊಂಡ ಹಸು ಕೊಟ್ಟಿಗೆಯಿಂದ ಓಡಿ ಹೋಗಿ ಅರಣ್ಯದಂಚಿನ ಆನೆ ಕಂದಕಕ್ಕೆ ಬಿದ್ದಿದೆ. ಹಸುವಿನ ಕಿರುಚಾಟ ಕೇಳಿದ ಮಾಲೀಕ ರಾಘವಯ್ಯ ಮನೆಯಿಂದ ಹೊರ ಬಂದು ಕೂಗಾಡಿದಾಗ ಹುಲಿ ಸ್ಥಳದಿಂದ ಓಡಿಹೋಗಿದೆ. ಹಸುವಿನ ಕುತ್ತಿಗೆ ಭಾಗಕ್ಕೆ ಹುಲಿ ಕಚ್ಚಿದ ಗಾಯವಾಗಿದೆ. ತಿತಿಮತಿ ಪಶುವೈದ್ಯಾಧಿಕಾರಿ ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳಕ್ಕೆ ತಿತಿಮತಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮೂರು ದಿನಗಳ ಹಿಂದೆ ಇದೇ ಭಾಗದಲ್ಲಿ ಹುಲಿ ಹಗಲಿನಲ್ಲಿಯೇ ಹಸುವನ್ನು ಬಲಿ ತೆಗೆದುಕೊಂಡಿತ್ತು. ಅರಣ್ಯದಂಚಿನಲ್ಲಿರುವ ಜಾನುವಾರುಗಳ ಮೇಲೆ ಹುಲಿ ನಿರಂತರ ದಾಳಿ ನಡೆಸುತ್ತಿದ್ದು ಜನರು ಭಯಭೀತರಾಗಿದ್ದಾರೆ. ಜಾನುವಾರುಗಳನ್ನು ಮೇಯಿಸುವುದಕ್ಕೂ ಭಯಪಡುತ್ತಿದ್ದಾರೆ. ಅರಣ್ಯಾಧಿಕಾರಿಗಳು ಹುಲಿ ದಾಳಿಯನ್ನು ನಿಯಂತ್ರಿಸಬೇಕು. ಜಾನುವಾರುಗಳು ಸಿಗದಿದ್ದರೆ ಮನುಷ್ಯರ ಮೇಲೆ ದಾಳಿ ನಡೆಸುವ ಆತಂಕ ಅರಣ್ಯದಂಚಿನ ನಿವಾಸಿಗಳಲ್ಲಿ ಮನೆ ಮಾಡಿದೆ.