ಸೀಪ್ಲೇನ್‍ನಲ್ಲಿ ಹಾರಾಡಿದ ಪ್ರಧಾನಿ

ಅಹ್ಮದಾಬಾದ್, ಅ. 31: ಗುಜರಾತ್‍ನಲ್ಲಿ ಆರಂಭವಾದ ದೇಶದ ಮೊಟ್ಟ ಮೊದಲ ಸೀಪ್ಲೇನ್ ಸೇವೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸೀಪ್ಲೇನ್‍ನಲ್ಲಿ ಹಾರಾಟ ನಡೆಸಿದರು. ಆ ಮೂಲಕ ದೇಶದ ಮೊದಲ ಸೀಪ್ಲೇನ್‍ನಲ್ಲಿ ಹಾರಾಟ ನಡೆಸಿದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾದರು. ಗುಜರಾತಿನ ಸಬರ್‍ಮತಿ ನದಿ ತೀರದಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಸೀಪ್ಲೇನ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು. ಸರ್ದಾರ್ ಪಟೇಲ್ ಅವರ 146ನೇ ಜನ್ಮ ದಿನದ ನಿಮಿತ್ತ ಈ ಸೇವೆಯನ್ನು ಆರಂಭಿಸಲಾಗಿದ್ದು, ಇದು ದೇಶದ ಮೊಟ್ಟ ಮೊದಲ ಸೀಪ್ಲೇನ್ ವಿಮಾನ ವ್ಯವಸ್ಥೆಯಾಗಿದೆ. ಸೀಪ್ಲೇನ್ ವಿಮಾನ ಅಹಮದಾಬಾದ್‍ನ ನದಿ ತೀರದಿಂದ 10.15 ನಿಮಿಷಕ್ಕೆ ಹಾರಾಟ ಕೈಗೊಳ್ಳಲಿದ್ದು, 10.45ಕ್ಕೆ ಕೆವಾಡಿಯಾ ತಲುಪಲಿದೆ. ಅಂದರೆ ಕೇವಲ 30 ನಿಮಿಷದಲ್ಲಿ ಕೆವಾಡಿಯಾ ತಲುಪಲಿದೆ. ಕೆವಾಡಿಯಾದ ಸರ್ದಾರ್ ಸರೋವರ ಡ್ಯಾಮ್‍ನ ಹಿನ್ನೀರಿನಲ್ಲಿ ವಿಮಾನ ಇಳಿಯಲಿದೆ.

ಕರ್ನಾಟಕ ಪೊಲೀಸ್‍ಗೆ ವಿಶೇಷ ಮೆಡಲ್

ಬೆಂಗಳೂರು, ಅ. 31: ಕೇಂದ್ರ ಗೃಹ ಸಚಿವಾಲಯದಿಂದ ಪ್ರತಿ ವರ್ಷ ನೀಡುವ “ಹೋಮ್ ಮಿನಿಸ್ಟರ್ ಸ್ಪೆಷಲ್ ಆಪರೇಷನ್ ಮೆಡಲ್”ಗೆ ರಾಜ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಪೊಲೀಸ್ ತಂಡ ಭಾಜನವಾಗಿದೆ. ತ್ವರಿತ ಅಪರಾಧ ಪ್ರಕರಣ ಬೇಧಿಸಿ ವಿಶೇಷ ಕಾರ್ಯಾಚರಣೆ ನಡೆಸುವ ತಂಡಗಳಿಗೆ ಪ್ರತಿ ವರ್ಷ ಗೃಹ ಇಲಾಖೆ ಹೆಸರಿನಲ್ಲಿ ಆಯಾ ರಾಜ್ಯಗಳ ಪೊಲೀಸ್ ತಂಡಕ್ಕೆ ಕೇಂದ್ರ ಸರ್ಕಾರ ಪದಕ ನೀಡಿ ಗೌರವಿಸುತ್ತದೆ. ಅದೇ ರೀತಿ ನಗರದಲ್ಲಿ ಅಡಗಿಕೊಂಡಿದ್ದ ಉಗ್ರರನ್ನು ಪತ್ತೆಹಚ್ಚಿ ಮಟ್ಟಹಾಕಲು ಯಶಸ್ವಿಯಾಗಿದ್ದ ಪೊಲೀಸ್ ವಿಶೇಷ ತಂಡ ಈ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ರಾಜ್ಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಡಿವೈಎಸ್‍ಪಿಗಳಾದ ಡಿ. ಕುಮಾರ್, ಎಸ್.ಕೆ. ಉಮೇಶ್, ಇನ್ಸ್‍ಪೆಕ್ಟರ್ ಸುಶೀಲಾ, ಕಾನ್‍ಸ್ಟೆಬಲ್‍ಗಳಾದ ವೈ. ಶಂಕರ್ ಮತ್ತು ಎನ್. ಪ್ರಕಾಶ್ ಅವರ ತಂಡ ವಿಶೇಷ ಪದಕಕ್ಕೆ ಭಾಜನವಾಗಿದೆ. 2019ರ ಡಿ. 21 ರಿಂದ 2020ರ ಜನವರಿ 20 ರವರೆಗೆ ನಡೆದಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಈ ಸಿಬ್ಬಂದಿ ಭಾಗವಹಿಸಿದ್ದರು ಎಂದು ಕೇಂದ್ರದ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಡಿ.ಕೆ. ಘೋಷ್ ತಿಳಿಸಿದ್ದಾರೆ.

ಕೋವಿಡ್ ಪಾಸಿಟಿವ್ ಸಂಖ್ಯೆ ಇಳಿಮುಖ

ಬೆಂಗಳೂರು, ಅ. 31: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಇಂದು 3,014 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,23,412ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್‍ನಿಂದಾಗಿ ಕಳೆದ 24 ಗಂಟೆಯಲ್ಲಿ 28 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11,168ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸತತ 17ನೇ ದಿನವೂ ಸೋಂಕು ಪ್ರಕರಣಕ್ಕಿಂತ ಚೇತರಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1,621 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,36,469ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು 17 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

ಪಡಿತರ ಚೀಟಿಗೆ ಸಿಗಲಿದೆ ಈರುಳ್ಳಿ

ಪಣಜಿ, ಅ. 31: ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಇದೀಗ ಬಡವರ ನೆರವಿಗೆ ಧಾವಿಸಿದ ಗೋವಾ ಸರ್ಕಾರ ಪಡಿತರ ಚೀಟಿ ಹೊಂದಿರುವವರಿಗೆ ಕಡಿಮೆ ಬೆಲೆ ಈರುಳ್ಳಿ ನೀಡಲು ಮುಂದಾಗಿದೆ. ಈ ಸಂಬಂಧ ಗೋವಾ ಸರ್ಕಾರ, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಏಜೆನ್ಸಿಯಿಂದ 1,045 ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಿ 3.5 ಲಕ್ಷ ಪಡಿತರ ಚೀಟಿ ಹೊಂದಿರುವವರಿಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ಪೂರೈಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಸರಕುಗಳ ಬೆಲೆ ಗಣನೀಯವಾಗಿ ಹೆಚ್ಚಾದ ನಂತರ ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ನೀಡುವ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಕಳೆದ ಬುಧವಾರ ಅನುಮೋದನೆ ನೀಡಿತ್ತು. ಈಗ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಕೆ.ಜಿ. 32 ರೂ.ಗೆ ಈರುಳ್ಳಿ ನೀಡಲು ಸರ್ಕಾರ ನಿರ್ಧರಿಸಿದೆ.

ಆಡಳಿತದಲ್ಲಿ ಕೇರಳಕ್ಕೆ ಮೊದಲ ಸ್ಥಾನ

ನವದೆಹಲಿ, ಅ. 31: ದೇಶದಲ್ಲಿ ಅತ್ಯುತ್ತಮ ಆಡಳಿತವಿರುವ ರಾಜ್ಯಗಳ ಪಟ್ಟಿಯಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರ ಕೇರಳ ಆಗ್ರಸ್ಥಾನದಲ್ಲಿದ್ದು, ಯೋಗಿ ಆದಿತ್ಯನಾಥ್ ಆಡಳಿತವಿರುವ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಪಬ್ಲಿಕ್ ಅಫೇರ್ಸ್ ಸೆಂಟರ್ ಎಂಬ ಸಂಸ್ಥೆ ಬಿಡುಗಡೆಗೊಳಿಸಿದ “ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020” ಇದರಲ್ಲಿ ಕೇರಳ ದೇಶದ ಅತ್ಯುತ್ತಮ ಆಡಳಿತವಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ ಉತ್ತರ ಪ್ರದೇಶ ಈ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಪಡೆದಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ ಮೊದಲ ಸ್ಥಾನ ಪಡೆದಿದೆ. ಸುಸ್ಥಿರ ಅಭಿವೃದ್ಧಿ ಮಾನದಂಡದ ಆಧಾರದಲ್ಲಿ ಈ ಸೂಚ್ಯಂಕದಲ್ಲಿ ರ್ಯಾಕಿಂಗ್ ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾಗಿರುವ ಇಸ್ರೋದ ಮಾಜಿ ಮುಖ್ಯಸ್ಥ ಕೆ ಕಸ್ತೂರಿರಂಗನ್ ಹೇಳಿದ್ದಾರೆ.

ಬಾಕ್ಸಿಂಗ್ ಟೂರ್ನಿ : ಸಂಜೀತ್‍ಗೆ ಚಿನ್ನ

ಪ್ಯಾರಿಸ್, ಅ. 31: ಮಾರಕ ಕೊರೊನಾ ವೈರಸ್‍ನ ಸುದೀರ್ಘ ವಿರಾಮದ ಬಳಿಕ ಆರಂಭವಾಗಿರುವ ಫ್ರೆಂಚ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್‍ಗಳಾದ ಅಮಿತ್ ಪಾಂಘಾಲ್ ಹಾಗೂ ಸಂಜೀತ್ ಚಿನ್ನದ ಪದಕ ಗೆದ್ದಿದ್ದಾರೆ. ಫ್ರಾನ್ಸ್‍ನ ನಾಂಟೆಸ್‍ನಲ್ಲಿ ನಡೆದ ಅಲೆಕ್ಸಿಸ್ ವ್ಯಾಸ್ಟೈನ್ ಅಂತರರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತದ ಬಾಕ್ಸರ್ ಅಮಿತ್ ಪಾಂಘಾಲ್ (52 ಕೆ.ಜಿ.) ಹಾಗೂ ಸಂಜೀತ್ (91 ಕೆ.ಜಿ.) ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಈ ಹಿಂದೆ ಅಮಿತ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದರು. ಏಷ್ಯನ್ ಚಾಂಪಿಯನ್ ಆಗಿರುವ ಅಮಿತ್ ಫೈನಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಮೇರಿಕಾದ ರೆನ್ ಅಬ್ರಹಾಂರನ್ನು 3-0 ಅಂತರದಿಂದ ಮಣಿಸಿದರು. ಮತ್ತೊಂದು ಫೈನಲ್ ಸ್ಪರ್ಧೆಯಲ್ಲಿ ಮಾಜಿ ಇಂಡಿಯಾ ಓಪನ್ ಚಾಂಪಿಯನ್ ಸಂಜೀತ್ ಅವರು ಫ್ರಾನ್ಸ್‍ನ ಸೊಹೆಬ್‍ರನ್ನು ಸೋಲಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು.