ಸೋಮವಾರಪೇಟೆ, ಅ. 30: ಸಮೀಪದ ನೇರುಗಳಲೆಯಲ್ಲಿ ನಡೆ ಯುತ್ತಿರುವ ಕಲ್ಲು ಗಣಿಗಾರಿಕೆ ಯಿಂದ ಯಾವದೇ ಸಮಸ್ಯೆಯಿಲ್ಲ. ಇದರಿಂದ ಶಾಲೆ ಮತ್ತು ಸಾರ್ವ ಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಥಳೀಯ ಕೆಲವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸ್ಥಳೀಯರಾದ ಎಲ್.ಡಿ. ಸತೀಶ್, ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ಲುಮಕ್ಕಿ ಕಾಡನೂರು ಗ್ರಾಮದಲ್ಲಿ ನಡೆಯು ತ್ತಿರುವ ಕಲ್ಲು ಗಣಿಗಾರಿಕೆ ಯಿಂದ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಸಮಸ್ಯೆ ಯಾಗುತ್ತಿದೆ ಎಂದು ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದರು. ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೂ, ಶಾಲೆಗೂ 500 ಮೀಟರ್ ಅಂತರವಿದ್ದು, ಇಲ್ಲಿವರೆಗೆ ಯಾವದೇ ಸಮಸ್ಯೆಯಾಗಿಲ್ಲ ಎಂದರು.

ಕಳೆದ 25 ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚಿನ ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ. 500ಕ್ಕೂ ಹೆಚ್ಚಿನ ಕಾರ್ಮಿಕರು ಇದರಿಂದಾಗಿ ಜೀವನ ಕಂಡುಕೊಂಡಿ ದ್ದಾರೆ. ಗಣಿಗಾರಿಕೆ ಯನ್ನು ನಿಲ್ಲಿಸಿದರೆ, ಅವರ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಸತೀಶ್ ಹೇಳಿದ್ದಾರೆ.

ಕೋವಿಡ್‍ನಿಂದಾಗಿ ಮೊದಲೇ ಕಾರ್ಮಿಕರು ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಅಲ್ಲದೆ, ಸುತ್ತಲಿನ ಜನರಿಗೆ ಕಲ್ಲು, ಜಲ್ಲಿ ಸಾಮಾನ್ಯ ಜನರು ಮತ್ತು ಸರ್ಕಾರಿ ಕಾಮಗಾರಿಗಳಿಗೆ ಕಡಿಮೆ ದರದಲ್ಲಿ ಸಿಗುತ್ತಿದೆ. ಅಲ್ಲದೆ, ಇಲ್ಲಿ ವ್ಯಾಪಾರೋದ್ಯಮವೂ ಉತ್ತಮವಾಗಿ ನಡೆಯುತ್ತಿದೆ. ರಸ್ತೆಗಳನ್ನು ಭೂ ಮಾಲೀಕರ ಜಮೀನಿನಲ್ಲಿ ಮಾಡಿಕೊಂಡಿರು ವುದರಿಂದ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

ಹೊರ ಊರಿನ ಕೆಲವರು ಗಣಿಗಾರಿಕೆಯನ್ನು ವಿರೋಧಿಸುತ್ತಿದ್ದು, ಇದರ ಹಿಂದೆ ಕಾಣದ ಕೈಗಳು ಮತ್ತು ಬೇರೆ ಗಣಿ ಮಾಲೀಕರ ಕೈವಾಡ ಇದೆ ಎಂದು ಆರೋಪಿಸಿದ ಅವರು, ಗ್ರಾಮದಲ್ಲಿ ಇನ್ನೂ 5 ಏಕರೆ ಪ್ರದೇಶದಲ್ಲಿ ಗಣಿಕಾರಿಕೆ ನಡೆಸಲು ಜಿಲ್ಲಾಧಿಕಾರಿಗಳು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಸ್ಥಳೀಯರಾದ ಜಗದೀಶ, ತಿಮ್ಮಯ್ಯ, ಬಿ.ಕೆ. ನಂದೀಶ ಮತ್ತು ಕುಂಞ ಉಪಸ್ಥಿತರಿದ್ದರು.