ಕಣಿವೆ, ಅ.30 : ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275 ರ ಬಸವನಹಳ್ಳಿ ರಸ್ತೆ ಬದಿಯ ಸರ್ವೆ ನಂಬರ್ 1/1 ರ ಜಾಗದಲ್ಲಿ ಕಳೆದ 15 ವರ್ಷಗಳಿಂದ ಹರಕು ಮುರಕು ಗುಡಿಸಲು ಕಟ್ಟಿಕೊಂಡು ವಾಸವಿರುವ ಸಂತ್ರಸ್ತರ ಫಜೀತಿ ಆ ದೇವರಿಗೇ ಪ್ರೀತಿ...?

ಕಳೆದ ಒಂದೂವರೆ ದಶಕಗಳಿಂದಲೂ ಬವಣೆಯ ಬದುಕು ಸವೆಸಿರುವ ಇಲ್ಲಿನ ಸುಮಾರು ಇಪ್ಪತ್ತು ಕುಟುಂಬಗಳಿಗೆ ಸ್ಥಳೀಯ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಯಾವುದೇ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ದೂರದ ವೀರಾಜಪೇಟೆ ತಾಲೂಕಿನ ದಿಡ್ಡಳ್ಳಿಯ ಸುಮಾರು 180 ಮಂದಿ ಸಂತ್ರಸ್ತರಿಗೆ ಸರ್ಕಾರ ಕಟ್ಟಿರುವ ಮನೆಗಳ ಮಾದರಿಯಲ್ಲಿ ಮತ್ತು ಅತೀ ಅಲ್ಪ ಅವಧಿಯಲ್ಲಿ ಮನೆಗಳನ್ನು ಕಟ್ಟಿಕೊಡುವತ್ತ ಏಕೆ ಜಿಲ್ಲಾಡಳಿತ ಮುಂದಾಗಲಿಲ್ಲ ಎಂದು ಗ್ರಾಮ ಪಂಚಾಯತಿ ಮಾಜಿ ಸದಸ್ಯೆ ಡಾಟಿ ಪ್ರಶ್ನಿಸುತ್ತಾರೆ.

ಬಸವನಹಳ್ಳಿಯ ಸರ್ವೆ ನಂಬರ್ 1/1 ರಲ್ಲಿ ಕಳೆದ 15 ವರ್ಷಗಳಿಂದ ಬೃಹತ್ ಗಾತ್ರ ಮತ್ತು ಎತ್ತರವಿರುವ ಮರಗಳ ನಡುವೆ ಗುಡಿಸಲು ನಿರ್ಮಿಸಿಕೊಂಡು ಗಾಳಿ ಮಳೆಯಲ್ಲಿ ಭಯಭೀತ ಬದುಕು ನಡೆಸುತ್ತಿರುವ ಈ ಕಡುಬಡ ಮಂದಿಗೆ ಸ್ಥಳೀಯ ಪಂಚಾಯಿತಿ ಆಡಳಿತ ಕುಡಿವ ಶುದ್ಧ ನೀರನ್ನಾಗಲೀ, ಸೂರನ್ನಾಗಲೀ, ಚರಂಡಿ ಹಾಗೂ ರಸ್ತೆಯನ್ನಾಗಲೀ ಒದಗಿಸಲು ಮುಂದಾಗಲಿಲ್ಲ.

ಸರ್ವೆ ನಂಬರ್ 1/1 ರಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶಕ್ಕಾಗಿ 3 ಎಕರೆಯನ್ನು, ಪಂಚಾಯತಿ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಅರ್ಧ ಎಕರೆ ಹಾಗೂ ಸ್ಮಶಾನಕ್ಕಾಗಿ ಅರ್ಧ ಎಕರೆ ಜಾಗವನ್ನು ಕಂದಾಯ ಇಲಾಖೆ ನೀಡಿತ್ತು. ಬಳಿಕ ಈ ಸರ್ವೆ ನಂಬರ್ ಜಾಗದಲ್ಲಿ ಗುಡಿಸಲು ಕಟ್ಟಿ ವಾಸವಿರುವ 18 ಕುಟುಂಬಗಳು ಸೇರಿ ಒಟ್ಟು 65 ಮಂದಿಗೆ ನಿವೇಶನದ ಉದ್ದೇಶಕ್ಕೆ ಕಳೆದ 2017 ರಲ್ಲಿ ಹಕ್ಕುಪತ್ರ ವಿತರಿಸಲಾಗಿತ್ತು.

ಆದರೆ ಅಂದಿನಿಂದ ಇಂದಿನ ವರೆಗೂ ಈ ಮಂದಿಗೆ ನಿವೇಶನ ಗಳನ್ನು ಗುರುತಿಸಿ ನೀಡುವಲ್ಲಿ ಪಂಚಾಯಿತಿ ಆಡಳಿತ ಮುಂದಾಗಿಲ್ಲ ಎಂದು ದೂರಿರುವ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಡಾಟಿ, ಕೂಡಲೇ ಈ ನಿರ್ಗತಿಕ ಮಂದಿ ವಾಸವಿರುವ ಪ್ರದೇಶದಲ್ಲಿ ಇರುವ ಮರಗಳನ್ನು ಕಡಿದು ಚರಂಡಿ ರಸ್ತೆ ನಿರ್ಮಿಸಿ ನಿವೇಶನಗಳನ್ನು ಗುರುತಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ಯಾಂ, ಅಲ್ಲಿರುವ ಮರಗಳನ್ನು ಕಡಿದು ತೆರವು ಗೊಳಿಸಲು ಅರಣ್ಯ ಇಲಾಖೆಗೆ ಈ ಮೊದಲೇ ಪತ್ರ ವ್ಯವಹಾರ ನಡೆಸಲಾಗಿದೆ. ಅದರೆ ಅರಣ್ಯ ಇಲಾಖೆ ಅಧಿಕಾರಿಗಳು ಏಕೋ ನಿಧಾನಗತಿ ಧೋರಣೆ ಅನುಸರಿಸಿದ್ದಾರೆ.

ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ಮರಗಳನ್ನು ತೆರವುಗೊಳಿಸಿ ಭೂಮಿಯನ್ನು ಸಮತಟ್ಟುಗೊಳಿಸಿ ಚರಂಡಿ ಹಾಗೂ ರಸ್ತೆಯನ್ನು ಸಿದ್ದಪಡಿಸಿ ನಿವೇಶನ ಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸ ಲಾಗುವುದು ಎಂದರು.

- ಕೆ.ಎಸ್.ಎಂ.