ಗೋಣಿಕೊಪ್ಪಲು, ಅ.30: ದಕ್ಷಿಣ ಕೊಡಗಿನ ವಿವಿಧ ಪ್ರದೇಶಗಳಲ್ಲಿ ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ಗ್ರಾವiಸ್ಥರಲ್ಲಿ ಆತಂಕಕ್ಕೆ ಕಾರಣವಾಗಿರುವ ಹುಲಿರಾಯನು ಕಳೆದ ಕೆಲವು ದಿನಗಳಿಂದ ಶ್ರೀಮಂಗಲ ಹೋಬಳಿಯ ವೆಸ್ಟ್‍ನೆಮ್ಮಲೆಯ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ನಾಗರಿಕರಿಗೆ ಪ್ರತ್ಯಕ್ಷಗೊಂಡು ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ.ಕೆಲವು ದಿನಗಳ ಹಿಂದೆ ರೈತರಾದ ಚೊಟ್ಟೆಯಂಡಮಾಡ ಸಂಜು ಅವರ ಭತ್ತದ ಗದ್ದೆ, ಉಳುವಂಗಡ ಅಜಿತ್‍ರವರ ಮನೆಯ ಸಮೀಪ ಚಟ್ಟಂಗಡ ಗಪ್ಪುಪೂವಯ್ಯ ಹಾಗೂ ಬಿಪಿನ್‍ರವರ ತೋಟದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಹುಲಿಯನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಬಲ್ಯಂಡಮಾಡ ಧನುರವರ ತೋಟದಲ್ಲಿ ಹುಲಿ ಘರ್ಜಿಸುವ ಶಬ್ದವು ಕೇಳಿಬಂದಿದೆ. ಕೆಲವು ತಿಂಗಳ ಹಿಂದೆ ತೂಚಮಕೇರಿ, ಬಲ್ಯಮಂಡೂರು, ನಡಿಕೇರಿ, ಬೇಗೂರು, ಟಿ.ಶೆಟ್ಟಿಗೇರಿ ಭಾಗದಲ್ಲಿ ಹುಲಿ ಕಾಣಿಸಿಕೊಂಡು ರೈತರ ಜಾನುವಾರುಗಳನ್ನು ದಾಳಿ ನಡೆಸಿ ತಿಂದು ಹಾಕುತ್ತಿತ್ತು. ಇದೀಗ ಜಾನುವಾರುಗಳ ಮೇಲಿನ ದಾಳಿಯು ಸದ್ಯದ ಮಟ್ಟಿಗೆ ಕಡಿಮೆಯಾಗಿದ್ದು ಹುಲಿಯ ಸಂಚಾರ ಮಾತ್ರ ಗ್ರಾಮಸ್ಥರ ನಿದ್ದೆಗೆಡಿಸಿದೆ.

-ಹೆಚ್.ಕೆ.ಜಗದೀಶ್