ಕಣಿವೆ, ಅ. 30: ಕಳೆದ ಹಲವು ವರ್ಷಗಳಿಂದಲೂ ನಾವು ಸಾಮಾನ್ಯವಾಗಿ ನೋಡುವ ಹಾಗೆ ಬಹಳಷ್ಟು ರೈತರು ಒಂದೇ ಮಾದರಿಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಆದರೆ ಹೆಚ್ಚು ಉತ್ಪಾದನೆಯಿಂದಾಗಿ ಸಹಜವಾಗಿಯೇ ಬೇಡಿಕೆ ಕುಸಿಯುತ್ತದೆ ಎಂದು ಗೊತ್ತಿದ್ದರೂ ಕೂಡ ರೈತರು ನಷ್ಟದ ಹಾದಿಯಲ್ಲೇ ಕ್ರಮಿಸುತ್ತಾರೆ. ಹೊಸ ಹೊಸ ಆವಿಷ್ಕಾರಗಳತ್ತ ಯಾರೂ ಕೂಡ ಮುಂದಾಗು ವುದೇ ಇಲ್ಲ. ಇನ್ನೊಂದೆಡೆ ರೈತರು ಯಾವುದೇ ಬೆಳೆ ಬೆಳೆಯ ಹೊರಟರೂ ಕೂಡ ರಾಸಾಯನಿಕಗಳನ್ನು ಸಿಂಪಡಿಸದೇ ಅನ್ಯ ಮಾರ್ಗವೇ ಇಲ್ಲ ಹಾಗಾಗಿದೆ ಇತ್ತೀಚಿನ ಕೃಷಿ.

ಭತ್ತ, ರಾಗಿ ಮತ್ತು ಜೋಳ. ಯಾವುದೇ ಬೆಳೆ ಬೆಳೆಯ ಹೊರಟರೆ ಕೀಟ ಬಾಧೆ ಹೇರಳವಾಗಿ ಬಾಧಿಸುವ ಕಾರಣಕ್ಕೆ ಅದನ್ನು ನಿಯಂತ್ರಿಸಿ ಬೆಳೆ ಉಳಿಸಿಕೊಳ್ಳಲು ವಿಪರೀತವಾದ ಔಷಧಿಗಳನ್ನು ಸಿಂಪಡಿಸದೇ ವಿಧಿಯೇ ಇಲ್ಲ. ಹಾಗಾಗಿ ಭೂಮಿಯು ಹಾಳು. ಬೆಳೆಯೂ ಹಾಳು. ಕೊನೆಗೆ ರೈತನ ನೆಮ್ಮದಿಯೂ ಹಾಳು.

ಆದರೆ ಇವೆಲ್ಲಕ್ಕೂ ಹೊರತಾದ ಪರಂಪರಾನುಗತ ಕೃಷಿ ಪದ್ಧತಿಗೆ ಬದಲಾಗಿ ಆಧುನಿಕ ಕೃಷಿಯೊಂದಕ್ಕೆ ಕುಶಾಲನಗರ ಸಮೀಪದ ಆರನೇ ಹೊಸಕೋಟೆ ಕೃಷಿಕ ದಂಪತಿಗಳು ಮುಂದಾಗಿದ್ದಾರೆ.

ಅದೇ ‘ಚಿಯಾ’ ಬೆಳೆ. ಕೇವಲ 120 ದಿನಗಳ ಒಳಗೆ ಬೆಳೆಯಬಹುದಾದಂತಹ ಬೆಳೆ ಇದಾಗಿದೆ. ಮಾರುಕಟ್ಟೆಯಲ್ಲಿ ಈ ಚಿಯಾ ಫಸಲಿಗೆ ಕೆ.ಜಿ.ಯೊಂದಕ್ಕೆ ಕನಿಷ್ಟ 300 ರೂ. ಗಳಿಂದ ಗರಿಷ್ಠ 400. ರೂ ಇದೆ ಎನ್ನುತ್ತಾರೆ ಸ್ವತಃ ಈ ಬೆಳೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರನೇ ಹೊಸಕೋಟೆ ಗ್ರಾಮದ ಗೋವಿಂದರಾಜು ಹಾಗೂ ಪ್ರೇಮ ದಂಪತಿಗಳು. ತುಮಕೂರಿನ ಹಾಲು ಒಕ್ಕೂಟದಲ್ಲಿ ನೌಕರರಾಗಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ ಈ ಗೋವಿಂದರಾಜು ನಿವೃತ್ತ ಜೀವನಕ್ಕೆ ಆಯ್ಕೆ ಮಾಡಿಕೊಂಡದ್ದು ಕೃಷಿಯನ್ನು.

ಆರನೇ ಹೊಸಕೋಟೆ ಗ್ರಾಮದ ತಮ್ಮ ಆರು ಎಕರೆ ವಿಶಾಲವಾದ ಬರಡು ಭೂಮಿಯಲ್ಲಿ ತರಹೇವಾರಿ ಬೆಳೆ ಬೆಳೆಯಲು ಹೊರಟ ಇವರು, ಒಂದು ಎಕರೆಯಲ್ಲಿ ‘ಚಿಯಾ’ ಬೆಳೆ ಬೆಳೆದಿದ್ದಾರೆ.

ಈ ಭಾಗದಲ್ಲಿನ ಕೃಷಿಕರಿಗೆ ಪರಿಚಯವೇ ಇಲ್ಲದ ಈ ಚಿಯಾ ಬೆಳೆಯನ್ನು ಬೆಳೆದಾಗ ಇದೇ ಮಾರ್ಗದಲ್ಲಿ ಸಂಚರಿಸುವ ಸುತ್ತಲಿನ ಗ್ರಾಮಸ್ಥರು ಈ ಚಿಯಾ ಬೆಳೆ ನೋಡಿ ಇದೇನು ಈ ಯಪ್ಪಾ ಏನೇನೋ ಹೊಸ ಪ್ರಯೋಗ ಮಾಡ್ತಾರಲ್ಲ ಅಂತ ಮಾತಾಡಿಕೊಂಡಿದ್ದರು.

ಆದರೆ ಈ ಬೆಳೆ ಕಟಾವಿಗೆ ಬಂದಾಗ ಅದನ್ನು ಸಿದ್ದಗೊಳಿಸಿ ಚೀಲಕ್ಕೆ ತುಂಬಿಸಿದಾಗ ಅದಕ್ಕೆ ಮಾರುಕಟ್ಟೆ ಯಲ್ಲಿ ಇರುವ ಬೆಲೆ ನೋಡಿ ಇದೇ ಊರ ರೈತರು ಅಚ್ಚರಿ ವ್ಯಕ್ತ ಪಡಿಸಿದ್ದರು.

ಅಂದರೆ ಒಂದು ಕ್ವಿಂಟಾಲ್ ಈ ಚಿಯಾ ಫಸಲಿಗೆ ಈಗ ಕೊರೊನಾ ಕಾರಣದಿಂದ 20 ಸಾವಿರ ಬೆಲೆ ಇದೆ. ಕೊರೊನಾ ಪೂರ್ವದಲ್ಲಿ ಇದೇ ಫಸಲಿಗೆ 40 ಸಾವಿರ ರೂ ಮಾರುಕಟ್ಟೆ ಯಲ್ಲಿ ಇತ್ತು ಎಂದು ಇದೇ ಗೋವಿಂದರಾಜು ಹೇಳುತ್ತಾರೆ.

ಒಂದು ಎಕರೆ ಚಿಯಾ ಬೆಳೆಯಲು ಕನಿಷ್ಟ ಹತ್ತು ಸಾವಿರ ಖರ್ಚಾಗುತ್ತದೆ. ಅದು ಹೇಗೆ ಬಂದರೂ ಕನಿಷ್ಟ ಲಕ್ಷ ರೂ. ಆದಾಯ ಬರುತ್ತದೆ ಎಂದು ‘ಶಕ್ತಿ’ಯೊಂದಿಗೆ ಮಾತನಾಡಿದ ಇವರು, ನಾನು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿದ್ದಾಗ ಕುಶಲೋಪರಿಗೆ ಬಂದ ಮತ್ತೋರ್ವ ಮಂದಿ ಈ ಚಿಯಾ ಬಗ್ಗೆ ಮಾಹಿತಿ ನೀಡಿದರು. ಬಳಿಕ ನಾನು ಸುಧಾರಿಸಿಕೊಂಡ ಬಳಿಕ ಒಂದು ಕೆಜಿ ಚಿಯಾ ಬೀಜಕ್ಕೆ 500 ರೂ ಕೊಟ್ಟು ತಂದು ವೈಜ್ಞಾನಿಕ ಮಾದರಿಯಲ್ಲಿ ಬಿತ್ತನೆ ಮಾಡಿದೆ. ಬಿತ್ತನೆಯ ಬಳಿಕ 120 ದಿನಗಳಲ್ಲಿ ಕಟಾವಿಗೆ ಬರುವ ಈ ಬೆಳೆಗೆ ಒಂದು ಎಕರೆಗೆ ಕೇವಲ 6 ರಿಂದ 8 ಸಾವಿರ ರೂ ವ್ಯಯವಾಗುತ್ತದೆ.

ಇತರೇ ಬೆಳೆಗಳಿಗೆ ಅಳವಡಿಸು ವಂತೆ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ರಾಸಾಯನಿಕ ಔಷಧಿಗಳ ಬಳಕೆ ಇಲ್ಲ. ಕೇವಲ ದನಗಳ ಗೊಬ್ಬರವನ್ನು ಅಳವಡಿಸಿ ದರೆ ಸಾಕು. ಕಾಲ ಕಾಲಕ್ಕೆ ನೀರು ಹರಿಸಿಕೊಂಡರೆ ಈ ಬೆಳೆ ಕೈ ಸೇರುತ್ತದೆ ಎನ್ನುತ್ತಾರೆ.

ಕಾಡಂಚಿನ ರೈತರ ಕಾಮಧೇನು

ಸಾಮಾನ್ಯವಾಗಿ ಕಾಡಂಚಿನಲ್ಲಿನ ಗ್ರಾಮಗಳ ರೈತರು ಯಾವುದೇ ಬೆಳೆ ಬೆಳೆದರೂ ಕಾಡು ಪ್ರಾಣಿಗಳು ಕಾಡಾನೆಗಳು ತಿಂದು ಹಾನಿ ಮಾಡುತ್ತವೆ. ಆದರೆ ಈ ಚಿಯಾ ಬೆಳೆಯನ್ನು ಕಾಡಾನೆಗಳಾಗಲೀ ಕಾಡು ಪ್ರಾಣಿಗಳಾಗಲೀ ತಿನ್ನುವುದಿಲ್ಲ. ಬೇರಿನಿಂದ, ಸೊಪ್ಪು ಹಾಗು ಕಾಂಡದವರೆಗೆ ಎಲ್ಲವೂ ಕಹಿ ಇರುವ ಕಾರಣ ಯಾವ ಪ್ರಾಣಿಗಳು ತಿನ್ನಲ್ಲ. ಜೊತೆಗೆ ದನಕರುಗಳು ಕೂಡ ತಿನ್ನಲ್ಲ ಎನ್ನುತ್ತಾರೆ ರೈತ ಗೋವಿಂದರಾಜು.

ಔಷಧೀಯ ಬೆಳೆ

ಚಿಯಾ ಬೆಳೆ ಮಾನವನ ದೇಹಕ್ಕೆ ಅಗತ್ಯವಾಗಿ ಬೇಕಿರುವ ಪೌಷ್ಟಿಕಾಂಶಗಳನ್ನು ನೀಡುತ್ತದೆ. ಇದರಲ್ಲಿ ನಾರಿನಂಶವಿದೆ. ಕ್ಯಾಲ್ಸಿಯಂ, ಐರನ್, ಮೆಗ್ನಿಷಿಯಂ, ಪೆÇಟ್ಯಾಷಿಯಂ, ಬಿ.ಅನ್ನಾಂಗ ಅಷ್ಟೇ ಅಲ್ಲ ಮಾನವನ ದೇಹದಲ್ಲಿ ಉತ್ಪತ್ತಿಯಾಗದೇ ಇರುವಂತಹ ಓಮೆಗಾ 3 ಪ್ಯಾಟಿ ಆಸಿಡ್ ಅನ್ನು ಕೊಡುವ ಸಂಪೂರ್ಣ ಪೌಷ್ಟಿಕ ಭರಿತ ಇದಾಗಿದೆ ಎಂದು ವಿಜ್ಞಾನ ಹೇಳುತ್ತದೆ.

ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ ಈ ಚಿಯಾ ಬೀಜವನ್ನು ತರಿಸಿಕೊಂಡು ಸಂಶೋದನೆ ನಡೆಸಿದ ಬಳಿಕ ರೈತರು ಹೆಚ್ಚಾಗಿ ಬೆಳೆಯಲು ಪ್ರಚೋದಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಈ ಚಿಯಾ ಬೆಳೆಯಲು ಸೂಕ್ತವಾದ ವಾತಾವರಣ ಎನ್ನಲಾಗಿದ್ದು, ನೈಸರ್ಗಿಕ ಪದ್ಧತಿಯಲ್ಲಿ ಈ ಬೆಳೆಯನ್ನು ಬೆಳೆಯಬಹುದಾಗಿದೆ.

ರೈತರು ಬೆಳೆವ ಈ ಚಿಯಾ ಫಸಲನ್ನು ಖರೀದಿಸಲು ಕಂಪೆನಿ ಗಳೇ ಮುಂದೆ ಬರುತ್ತವೆ. ಮೈಸೂರು, ಹೆಚ್.ಡಿ.ಕೋಟೆ, ಹುಣಸೂರು, ಸರಗೂರು ಮೊದಲಾದ ಕಡೆಗಳಲ್ಲಿ ಈ ಬೆಳೆಯನ್ನು ಹೆಚ್ಚು ಬೆಳೆಯಲಾಗು ತ್ತಿದ್ದು ಅಲ್ಲಿ ಇದನ್ನು ಖರೀದಿಸುವ ವರ್ತಕರು ಇದ್ದಾರೆ.

ಪುದಿನ ಕುಟುಂಬಕ್ಕೆ ಸೇರಿರುವ ಈ ಎಣ್ಣೆಕಾಳು ಬೆಳೆ ಮೆಕ್ಸಿಕೋ ದಿಂದ ಭಾರತಕ್ಕೆ ಬಂದಂತಹ ತಳಿ ಎನ್ನಲಾಗಿದೆ. ಇದರ ಬೇರು ಹಾಗೂ ಕಾಂಡಗಳು ಔಷಧಿ ಯುಕ್ತ ವಾಗಿರುವುದರಿಂದ ಔಷಧೀಯ ಕಂಪೆನಿಗಳು ಇದನ್ನು ಖರೀದಿ ಸುತ್ತವೆ ಎನ್ನಲಾಗುತ್ತಿದೆ.

ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳಿಗೆ ಈ ಚಿಯಾ ಅತ್ಯಂತ ಹೆಚ್ಚು ಉಪಯೋಗ ಕಾರಿಯಾಗಿದ್ದು, ಹೃದಯ ಸಂಬಂಧಿ ರೋಗಗಳಿಗೆ ರಾಮಬಾಣವಾಗಿದೆ. ಮೀನು ತಿನ್ನುವವರಿಗೆ ಸಿಗುವ ಓಮೆಗಾ 3 ಪ್ಯಾಟಿನಾ ಈ ಚಿಯಾದಲ್ಲಿ ಸಿಗುತ್ತದೆ ಎಂದು ಬೆಂಗಳೂರು ಕೃಷಿ ವಿಜ್ನಾನ ಕೇಂದ್ರದ ಡಾ.ಎಂ.ಎಸ್.ಆನಂದ್ ಹೇಳುತ್ತಾರೆ.

ಒಟ್ಟಾರೆ ಭೂಮಿಯ ಮಣ್ಣನ್ನು ಅನಾರೋಗ್ಯ ಗೊಳಿಸದೇ ಬೆಳೆವ, ರಾಸಾಯನಿಕಗಳನ್ನು ಹೀರಿ ಬೆಳೆಯದ ಈ ಚಿಯಾ ಬೆಳೆಗೆ ಹೆಚ್ಚು ಒಲವು ತೋರುವ ಮೂಲಕ ರೈತರು ಆರ್ಥಿಕವಾಗಿ ಲಾಭ ಗಳಿಸಬಹುದು. ಜೊತೆಗೆ ಭೂಮಿಯನ್ನು ಸಂರಕ್ಷಿಸಿ ಕೊಳ್ಳಬಹುದು.

- ಕೆ.ಎಸ್. ಮೂರ್ತಿ