ಮಡಿಕೇರಿ, ಅ. 30 : ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಬರುವ, ಕೊಡಗು ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯಿಂದ, ವೃತ್ತಿ ನಿರತ ಕುಶಲಕರ್ಮಿಗಳಿಗೆ ಸುಧಾರಿತ ಆಧುನಿಕ ವಿದ್ಯುತ್ ಚಾಲಿತ ಯಂತ್ರ ಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿ ಸಿ.ಎನ್. ರಘು ಮಾಹಿತಿ ನೀಡಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯ ನಿರ್ವಹಣೆ ಹಾಗೂ ಕೊಡಗಿನಲ್ಲಿ ಕಾರ್ಯಚಟುವಟಿಕೆ ಕುರಿತು ಮಾಹಿತಿ ಬಯಸಿದಾಗ ಪ್ರತಿಕ್ರಿಯಿಸಿದ ಅವರು, ಈ ಜಿಲ್ಲೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆ ಸಹಿತ ಸರಕಾರದಿಂದ ಒಟ್ಟು ಎಂಟು ಸ್ಥಾನಗಳು ಮಂಜೂರಾಗಿದ್ದು, ಪ್ರಸಕ್ತ ಪ್ರಭಾರ ಅಧಿಕಾರಿಯಾಗಿ ತಾವೊಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿರುವದಾಗಿ ಅಸಹಾಯಕತೆ ತೋಡಿಕೊಂಡರು. ಯಾವೊಬ್ಬ ಸಿಬ್ಬಂದಿಯೂ ಇಲ್ಲದೆ ದೈನಂದಿನ ಕಚೇರಿ ಕೆಲಸಗಳಿಗೆ ಸಮಸ್ಯೆ ಎದುರಾಗಿದ್ದು, ಕೊಡಗು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ತಮ್ಮ ಇಲಾಖೆಯು ಕೆಲಸ ನಿರ್ವಹಿಸುತ್ತಿರುವದಾಗಿ ತಿಳಿಸಿದರು.
ಯಂತ್ರ ಪೂರೈಕೆ : ಜಿ.ಪಂ. ಅನುದಾನದೊಂದಿಗೆ ಹೊಲಿಗೆ ತರಬೇತಿ ಹೊಂದಿರುವ ಗ್ರಾಮೀಣ ಬಡ ಮಹಿಳೆಯರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪೂರೈಸಲಾಗುತ್ತದೆ. ಕಳೆದ ವರ್ಷ 72 ಫಲಾನುವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಪ್ರಸಕ್ತ 70 ಮಂದಿಗೆ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ವಿವಿಧ ಸೌಲಭ್ಯ : ಅದೇ ರೀತಿ ವೃತ್ತಿನಿರತ ಕುಶಲಕರ್ಮಿಗಳಾದ ಕಮ್ಮಾರಿಕೆ, ಬಡಗಿ, ಗಾರೆಕೆಲಸ, ಅಗಸ ಹಾಗೂ ಸವಿತಾ ಸಮಾಜದವರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವದು ಎಂದು ಅಧಿಕಾರಿ ರಘು ವಿವರಣೆ ನೀಡಿದರು. ಈ ಪೈಕಿ ಅಗಸರಿಗೆ ಹಿತ್ತಾಳೆಯ ಕೆಂಡದಿಂದ ಬಿಸಿಮಾಡುವ ಇಸ್ತ್ರಿಪೆಟ್ಟಿಗೆ ಹಾಗೂ ವಿದ್ಯುತ್ ಚಾಲಿತ ಇಸ್ತ್ರಿಪೆಟ್ಟಿಗೆ ಒದಗಿಸಲಾಗುತ್ತದೆ. ಇದರೊಂದಿಗೆ ಮೇಜು ಇತ್ಯಾದಿ ಸಲಕರಣೆಗಳನ್ನು ಕೂಡ ಆ ವೃತ್ತಿನಿರತರಿಗೆ ವಿತರಿಸಲಾಗುವದು ಎಂದು ಸ್ಪಷ್ಟಪಡಿಸಿದರು.
ಸವಿತಾ ಸಮಾಜದವರಿಗೆ ಸ್ವಯಂ ಚಾಲಿತ ಆಸನದೊಂದಿಗೆ ವೃತ್ತಿ ಸಂಬಂಧ ಇತರ ಉಪಕರಣಗಳನ್ನು ಒದಗಿಸಲಾಗುತ್ತದೆ. ಗಾರೆ ಕೆಲಸಗಾರರಿಗೆ ಕೂಡ ಸಂಬಂಧಿಸಿದ ಕೆಲಸ ನಿರತ ಉಪರಕಣ ಪೂರೈಸಲಾಗುವದು. ಕಮ್ಮಾರಿಕೆಗಾಗಿ ಕುಲುಮೆಯಂತ್ರ ಇನ್ನಿತರ ಉಪಕರಣ ಮತ್ತು ಮರ ಕೆಲಸಕ್ಕೆ ವಿದ್ಯುತ್ ಚಾಲಿತ ಯಂತ್ರ, ಇತರ ಪರಿಕರಗಳನ್ನು ಇಲಾಖೆಯಿಂದ ಒದಗಿಸಲಾಗುವದು. ಪ್ರತಿ ಕುಶಲಕರ್ಮಿಗೆ ಸರಕಾರದ ಮಾರ್ಗಸೂಚಿಯಂತೆ ರೂ. 8 ಸಾವಿರ ಮೊತ್ತದ ಸಲಕರಣೆಗಳನ್ನು ಒದಗಿಸುವದಾಗಿ ತಿಳಿಸಿದರು.
ಕೊರೊನಾ ಅಡ್ಡಿ : ಕೊಡಗಿನಲ್ಲಿ ಇಲಾಖೆಯಿಂದ ಆರ್ಥಿಕ ಸುಧಾರಣೆಗಾಗಿ ಕಳೆದ ಎರಡು ದಶಕಕ್ಕೂ ಹಿಂದಿನಿಂದ ರೂ. 25 ಸಾವಿರದಿಂದ 40 ಸಾವಿರ ಮೊತ್ತದ ಸಾಲ ಸೌಲಭ್ಯ ಪಡೆದಿರುವ ಕುಶಲಕರ್ಮಿಗಳಿದ್ದಾರೆ. ಇಂತಹ ಸ್ವಾವಲಂಬಿಗಳನ್ನು ಪ್ರೋತ್ಸಾಹಿಸಲು ಕೊರೊನಾದಿಂದಾಗಿ ಈ ವರ್ಷ ವಸ್ತು ಪ್ರದರ್ಶನ ಆಯೋಜಿಸಲು ಸಾಧ್ಯವಾಗಿಲ್ಲ ಎಂದು ನೆನಪಿಸಿದರು.
ಬಡ್ಡಿ ರಹಿತ ಸಾಲ : ಈ 25 ವರ್ಷಗಳಿಂದ ಉದ್ದಿಮೆದಾರರು ಇಲಾಖೆಯಿಂದ ಕಿರು ಸಾಲ ಸೌಲಭ್ಯ ಪಡೆದಿದ್ದು, ಕನಿಷ್ಟ ಬಡ್ಡಿಯೊಂದಿಗೆ ಬ್ಯಾಂಕ್ಗಳಿಗೆ ಸಾಲ ಮರುಪಾವತಿಸಿಲ್ಲ. ಅಂತಹವರು ಬಡ್ಡಿ ಹೊರತಾದ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ, ಮರು ಸೌಲಭ್ಯ ಲಭಿಸಲಿರುವದಾಗಿ ಅವರು ನೆನಪಿಸಿದರು.
ಒಟ್ಟಿನಲ್ಲಿ ಆಯಾ ಕುಶಲಕರ್ಮಿಗಳು ಸರಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಸ್ವಾವಲಂಬಿ
ಜೀವನ ಕಂಡುಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಎಂದು
ಅಧಿಕಾರಿ ರಘು ಅಭಿಪ್ರಾಯಪಟ್ಟರು. ಈ ಇಲಾಖೆಯಲ್ಲಿ 1987ರಿಂದ ಇದುವರೆಗೆ ಅಲ್ಪ ಅವಧಿಗೆ 7 ಮಂದಿ ಉಪನಿರ್ದೇಶಕರ ಹೊರತು ಒಟ್ಟು 33 ಮಂದಿಯ ಪೈಕಿ 26 ಅಧಿಕಾರಿಗಳು ಪ್ರಬಾರ ಹೊಣೆಗಾರಿಕೆ ನಿರ್ವಹಿಸಿದವರಾಗಿದ್ದಾರೆ!