ಗೋಣಿಕೊಪ್ಪಲು, ಅ.29: ನಗರದಲ್ಲಿ ಟ್ರಾಫಿಕ್ ವ್ಯವಸ್ಥೆಯನ್ನು ಇನ್ನಷ್ಟು ಸುಲಲಿತಗೊಳಿಸಲು ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ, ಗೋಣಿಕೊಪ್ಪ ಠಾಣೆಗೆ ನೂತನವಾಗಿ ಆಗಮಿಸಿರುವ ಸಬ್‍ಇನ್ಸ್‍ಫೆಕ್ಟರ್ ಹೆಚ್.ಸುಬ್ಬಯ್ಯ ಹಾಗೂ ಸಿಬ್ಬಂದಿ ಮುಂಜಾನೆಯಿಂದಲೇ ರಸ್ತೆಗಿಳಿದು ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ಆಗಿಂದ್ದಾಗಿಯೇ ಟ್ರಾಫಿಕ್ ಜಾಮ್ ಆಗುತ್ತಿರುವುದನ್ನು ಮನಗಂಡ ಅಧಿಕಾರಿಗಳು ಇವುಗಳನ್ನು ಸರಿಪಡಿಸಲು ರಸ್ತೆಯುದ್ದಕ್ಕೂ ಸಂಚರಿಸಿ ಅವಲೋಕಿಸಿದರು.ಅಲ್ಲದೆ ವಾಹನ ಸುಗಮ ಸಂಚಾರಕ್ಕೆ ಅನುಕೂಲವಾಗಲು ಹಲವು ಮಾರ್ಪಾಡುಗಳನ್ನು ಸ್ಥಳದಲ್ಲಿಯೇ ಮಾಡಿಸಿದರು. ಹೊರ ಜಿಲ್ಲೆಯಿಂದ ವಾಹನದಲ್ಲಿ ಆಗಮಿಸಿ ವ್ಯಾಪಾರ ಮಾಡುವವರು ರÀಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ ಇವುಗಳಿಗೆ ಕಾಯಕಲ್ಪ ನೀಡಲು ನಿರ್ಧರಿಸಿದರು.

ನಗರದ ಬೈಪಾಸ್ ರಸ್ತೆಯಲ್ಲಿ ಸದಾ ವಾಹನಗಳ ಸಂಚಾರದ ಸಂದರ್ಭ ಟ್ರಾಫಿಕ್ ಜಾಮ್ ಸಂಭವಿಸುವುದನ್ನು ಖುದ್ದು ಪರಿಶೀಲನೆ ನಡೆಸಿದ ಸಂದರ್ಭ ಬೈಪಾಸ್ ರಸ್ತೆಯ ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ವಾಹನಗಳಲ್ಲಿ ತರಕಾರಿ ಮುಂತಾದ ಸಾಮಗ್ರಿಗಳನ್ನು ಮಾರಾಟ ಮಾಡುವುದು ಅಧಿಕಾರಿಗಳ ಅರಿವಿಗೆ ಬಂತು. ನಾಗರಿಕರು ವಾಹನವನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿ ವಾಹನದಿಂದಲೇ ಅಗತ್ಯ ವಸ್ತುಗಳನ್ನು ಖರೀದಿ ಮಾಡುವುದು ಕಂಡು ಬಂತು. ಇದರಿಂದ ರಸ್ತೆ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿರುವುದನ್ನು ಮನಗಂಡ ಸಿಪಿಐ ರಾಮರೆಡ್ಡಿ ಎಸ್.ಐ.ಸುಬ್ಬಯ್ಯ ವ್ಯಾಪಾರದ ವಾಹನಗಳನ್ನು ರಸ್ತೆಯ ಒಂದು ಭಾಗಕ್ಕೆ ಸ್ಥಳಾಂತರ ಮಾಡುವ ಮೂಲಕ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿದರು. ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ನಡೆಸದಂತೆ ಸೂಚಿಸಿದರು.

ರಸ್ತೆಯ ಬದಿಯಲ್ಲಿ ಅಳವಡಿಸಿರುವ ವಿದ್ಯುತ್ ಕಂಬದಿಂದ ಆಚೆಗೆ ವಾಹನಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದರು. ಪೊಲೀಸರ ನಿರ್ದೇಶನದಂತೆ ವಾಹನವನ್ನು ಸ್ಥಳಾಂತರಗೊಳಿಸಿದ ವ್ಯಾಪಾರಸ್ಥರು ಪೊಲೀಸರು ಸೂಚಿಸಿದ ಸ್ಥಳಕ್ಕೆ ಸ್ಥಳಾಂತರಗೊಂಡು ತಮ್ಮ ವ್ಯಾಪಾರ ಮುಂದುವರೆಸಿದರು. ಇದರಿಂದ ಎರಡು ಬದಿಯಲ್ಲಿ ವಾಹನ ನಿಲುಗಡೆಯಿಂದ ತೊಂದರೆ ಆಗುತ್ತಿದ್ದ ಸಮಸ್ಯೆಗೆ ಕಾಯಕಲ್ಪ ಸಿಕ್ಕಂತಾಯಿತು.

ರಸ್ತೆಯ ಬದಿಯಲ್ಲಿ ವಕ್ರ್ಸ್ ಶಾಪ್ ತೆರೆದುಕೊಂಡು ಫುಟ್‍ಪಾತ್‍ಅನ್ನು ಅತಿಕ್ರಮಣ ಮಾಡಿಕೊಂಡು ದ್ವಿಚಕ್ರ ವಾಹನಗಳನ್ನು ರಿಪೇರಿ ಮಾಡುತ್ತಿದ್ದ ವಕ್ರ್ಸ್ ಶಾಪ್‍ನ ಮಾಲೀಕರಿಗೆ ಎಚ್ಚರಿಕೆ ನೀಡಿದ ಪೊಲೀಸರು ವಾಹನಗಳನ್ನು ವಕ್ರ್ಸ್ ಶಾಪ್‍ನ ಒಳಗಡೆ ನಿಲ್ಲಿಸಿಕೊಂಡು ದುರಸ್ತಿ ಮಾಡುವಂತೆ ಸೂಚನೆ ನೀಡಿದರು.

ಕೆಲವು ಅಂಗಡಿ ಮಾಲೀಕರು ತಮ್ಮ ತಮ್ಮ ಅಂಗಡಿಯ ನಾಮಫಲಕಗಳನ್ನು ಪುಟ್‍ಪಾತ್‍ನ ಮೇಲೆ ಅಳವಡಿಸಿಕೊಂಡಿದ್ದರಿಂದ ರಸ್ತೆ ಸಂಚಾರಕ್ಕೆ ತೊಡಕುಂಟಾಗುವುದನ್ನು ಅರಿತ ಪೊಲೀಸರು ನಾಮಫಲಕಗಳು ಫುಟ್‍ಪಾತಿನಿಂದ ಸ್ಥಳಾಂತರ ಮಾಡಿಸಿದರು.

ಪೊಲೀಸ್ ಅಧಿಕಾರಿಗಳೊಂದಿಗೆ ಪೊಲೀಸ್ ಸಿಬ್ಬಂದಿಗಳಾದ ಮಣಿಕಂಠ, ಸಿ.ಜಿ.ಪುಟ್ಟರಾಜು, ಕೃಷ್ಣಪ್ಪ,ಹಾಜರಿದ್ದರು.

ಗೋಣಿಕೊಪ್ಪ ಪೊನ್ನಂಪೇಟೆ ಮುಖ್ಯ ರಸ್ತೆಯ ಸೇತುವೆ ಕಿರಿದಾಗಿದ್ದು, ಈ ಸೇತುವೆಯನ್ನು ಅಗಲೀಕರಣಗೊಳಿಸಿದಲ್ಲಿ ಬೈಪಾಸ್ ರಸ್ತೆಯಿಂದ ವಾಹನಗಳು ಸುಗಮವಾಗಿ ಸಂಚರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕಿದೆ.

ಗೋಣಿಕೊಪ್ಪ ಪೊನ್ನಂಪೇಟೆ ಮುಖ್ಯ ರಸ್ತೆಯ ಸೇತುವೆ ಕಿರಿದಾಗಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇದನ್ನು ಅಗಲೀಕರಣಗೊಳಿಸಲು 18 ಲಕ್ಷ ಹಣವನ್ನು ಕಾಯ್ದಿರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಸಧ್ಯದಲ್ಲಿಯೇ ನಡೆಯಲಿದೆ. ಅನ್‍ಲೈನ್‍ನಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆಯುವುದರಿಂದ ಫೆಬ್ರವರಿ ಅಂತ್ಯದೊಳಗೆ ಸೇತುವೆಯನ್ನು ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಪಿಡಬ್ಲ್ಯೂಡಿ ಅಧಿಕಾರಿ ಎಂ.ಇ. ಸುರೇಶ್ ತಿಳಿಸಿದ್ದಾರೆ.