ಆಲೂರು ಸಿದ್ದಾಪುರ, ಅ. 28 : ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶನಿವಾರಸಂತೆ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ಕುರಿತು ಆಸ್ಪತ್ರೆ ಸಿಬ್ಬಂದಿಗಳಿಂದ ಪ್ರತಿಜ್ಞಾವಿಧಿ ಮತ್ತು ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವಾರಿಯರ್‍ಗಳಾದ ಆಲೂರುಸಿದ್ದಾಪುರ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕಿಯರಿಗೆ ಮತ್ತು ಸಿಬ್ಬಂದಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್ ಅವರು ಕೊರೊನಾ ನಿರ್ಮೂಲನೆಗಾಗಿ ಮತ್ತು ಜನರ ಆರೋಗ್ಯ ಕಾಪಾಡುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ತದನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಶನಿವಾರಸಂತೆ ಪೊಲೀಸ್ ಇಲಾಖೆ ಸಿಬ್ಬಂದಿಗಳು ಕೋವಿಡ್-19 ವೈರಸ್ ತಡೆಗಟ್ಟಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜನ ಜಾಗೃತಿ ಕುರಿತಾದ ಘೋಷಣೆಗಳನ್ನು ಕೂಗುತ್ತಾ ಆಸ್ಪತ್ರೆಯಿಂದ ಮುಖ್ಯರಸ್ತೆ ಮೂಲಕವಾಗಿ ಆಲೂರುಸಿದ್ದಾಪುರ ಐಟಿಐ ಕಾಲೇಜು ರಸ್ತೆವರೆಗೆ ಜಾಥಾ ನಡೆಸಿದರು. ಈ ಸಂದರ್ಭ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ತಿಳಿಹೇಳಿ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು. ಪೊಲೀಸ್ ಸಿಬ್ಬಂದಿ ದಂಡ ವಿಧಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣ ಜನ ಜಾಗೃತಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕೊರೊನಾ ವೈರಸ್ ಬಗ್ಗೆ ಆತಂಕ ಪಡಬೇಕಾಗಿಲ್ಲ, ಪ್ರತಿಯೊಬ್ಬರೂ ಮನೆಯಿಂದ ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ವೈಯುಕ್ತಿಕ ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವುದು, ಮನೆಗೆ ಬರುವಾಗ ಸೋಪಿನಿಂದ ಕೈಕಾಲುಗಳನ್ನು ತೊಳೆದುಕೊಳ್ಳುವ ಮುಂಜಾಗ್ರತೆ ಕ್ರಮದಿಂದ ಖಂಡಿತವಾಗಲೂ ಕೊರೊನಾ ತಡೆಗಟ್ಟಬಹುದು ಎಂದರು. ಶನಿವಾರಸಂತೆ ಎಎಸ್‍ಐ ಗೋವಿಂದ್‍ರಾಜ್ ಮಾತನಾಡಿ-ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಪೊಲೀಸ್ ಇಲಾಖೆ ಕೊರೊನಾ ವಿರುದ್ಧ ಹೋರಾಡುತ್ತಿದೆ, ಜನರು ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ, ಮಾಸ್ಕ್ ಧರಿಸದವರಿಗೆ ಪೊಲೀಸ್ ಇಲಾಖೆ ಸಿಬ್ಬಂದಿ ಅವರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಮಾತ್ರ ದಂಡ ವಿಧಿಸುತ್ತಿದೆಯಷ್ಟೆ ಎಂದರು. ಜಾಥಾ ಕಾರ್ಯಕ್ರಮದಲ್ಲಿ ಆಲೂರುಸಿದ್ದಾಪುರ ಗ್ರಾ.ಪಂ.ಪಿಡಿಒ ಪೂರ್ಣಿಮಾ, ಪೊಲೀಸ್ ಸಿಬ್ಬಂದಿಗಳಾದ ಲೋಕೇಶ್, ಸಫೀರ್, ರಘು, ಆಸ್ಪತ್ರೆ ಕಿರಿಯ ಸಹಾಯಕಿಯರು, ಸಿಬ್ಬಂದಿಗಳು ಹಾಗೂ ಆಸ್ಪತ್ರೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.