ಮಡಿಕೇರಿ, ಅ. 28: ಕೊರೊನಾ ಹಿನ್ನೆಲೆ ಈ ಬಾರಿ ಸಾಕಷ್ಟು ನಿರ್ಬಂಧಗಳೊಂದಿಗೆ ದಸರಾ ಆಚರಿಸಲ್ಪಟ್ಟು ಕರಗ ಉತ್ಸವ ಆರಂಭದ ದಿನದಂದು ಕಂಚಿಕಾಮಾಕ್ಷಿ ಕರಗ ದೈವ ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ ವಿಜಯದಶಮಿಯಂದು ಕೋಟೆ ಮಾರಿಯಮ್ಮ ಕರಗ ದೈವ ಕೋಪಗೊಂಡು ಆಕ್ರೋಶ ವ್ಯಕ್ತಪಡಿಸಿದ ಮತ್ತೊಂದು ಘಟನೆ ನಡೆದಿದೆ.
ವಿಜಯದಶಮಿಯಂದು ಕೋಟೆ ಮಾರಿಯಮ್ಮ ದೇವಾಲಯದ ಎದುರೇ ಕರಗ ದೈವ ಅಸಮಾಧಾನ ವ್ಯಕ್ತಪಡಿಸಿದ್ದು, ‘ಎಲ್ಲರನ್ನು ನಾನು ಸಹಿಸಿಕೊಳ್ಳಬೇಕು; ನನ್ನನ್ನು ಸಹಿಸಿಕೊಳ್ಳುವವರು ಯಾರಿಲ್ಲಿ? ಎಂದು ಪ್ರಶ್ನಿಸಿದ್ದಲ್ಲದೆ, ನಿಮ್ಮ ಸ್ವಾರ್ಥಕ್ಕೋಸ್ಕರ ನನ್ನನ್ನು ಉಪಯೋಗಿಸಿಕೊಳ್ತಿರಾ, ಅದು ಈ ಜಾಗದಲ್ಲಿ ನಡಿಯಲ್ಲ. ನಾನು ಯಾವುದನ್ನು ಕೇಳಿ ತಗೊಳಲ್ಲ, ನಾನೇನು ಅಂತ ಹೋಗ್ತಾ ಹೋಗ್ತಾ ನಿಮಗೆಲ್ಲ ತಿಳಿಸಿಕೊಡ್ತಿನಿ. ಈ ಹಬ್ಬ ನಾನು ತೆಗೆದುಕೊಂಡ ತೀರ್ಮಾನ; ನೀವು ತೆಗೆದುಕೊಂಡ ತೀರ್ಮಾನವಲ್ಲ. ಈ ನಾಡಿಗಾಗಿ ನಾಲ್ಕು ಶಕ್ತಿಗಳ ಮಾರಿಯಮ್ಮ ತೆಗೆದುಕೊಂಡ ತೀರ್ಮಾನವಿದು. ಆದರೆ ಪ್ರಸ್ತುತ ಕೆಲ ಬದಲಾವಣೆಗಳು-ವ್ಯತ್ಯಾಸಗಳು ನಡಿತಾ ಇದೆ. ಅದನ್ನೆಲ್ಲಾ ನಾನೂ ನೋಡ್ತಾ ಇದ್ದೀನಿ. ಹೋಗ್ತಾ ಹೋಗ್ತಾ ಬದಲಾವಣೆ ವ್ಯತ್ಯಾಸಗಳನ್ನು ನಾನೇ ಬದಲಾಯಿಸಿ ತೋರಿಸುತ್ತೇನೆ. ನಾನ್ಯಾರು ಅಂತ ತೋರಿಸಿಕೊಡ್ತೇನೆ ಇಂತಹ ತಪ್ಪನ್ನು ಮುಂದೆ ಮಾಡಬೇಡಿ’ ಎಂದು ದೈವ ನುಡಿದಿದೆ.