ಸೋಮವಾರಪೇಟೆ, ಅ.26: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ-ನಂದಿಮೊಟ್ಟೆಯ ಹೊಳೆಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ತೆರಳಿದ ವ್ಯಕ್ತಿಯೂ ಸಹ ದುರ್ಮರಣಕ್ಕೀಡಾಗಿರುವ ಧಾರುಣ ಘಟನೆ ಆಯುಧ ಪೂಜೋತ್ಸವ ದಿನದಂದು ನಡೆದಿದೆ.ಮಡಿಕೇರಿ ಲಯನ್ಸ್ ಕ್ಲಬ್‍ನ ಮಾಜೀ ಅಧ್ಯಕ್ಷ, ಲಯನ್ಸ್ ಟ್ರಸ್ಟ್‍ನ ಹಾಲಿ ಖಜಾಂಚಿಯಾಗಿದ್ದ ಬಾಚಿನಾಡಂಡ ಮಧು ನಂಜಪ್ಪ (48) ಹಾಗೂ ಇವರ ಸಹೋದರ ಬಾಚಿನಾಡಂಡ ಮೊಣ್ಣಪ್ಪ ಅವರ ಪುತ್ರ ನಿರೋಶ್ ನಾಚಪ್ಪ (11) ಮೃತಪಟ್ಟ ದುರ್ದೈವಿಗಳು.

ಮೊಣ್ಣಪ್ಪ ಅವರ ಕುಟುಂಬ ಬೆಂಗಳೂರಿನಲ್ಲಿ ಹಾಗೂ ನಂಜಪ್ಪ ಅವರ ಕುಟುಂಬ ಮಡಿಕೇರಿಯಲ್ಲಿ ನೆಲೆಸಿದ್ದು, (ಮೊದಲ ಪುಟದಿಂದ) ಈರ್ವರ ಕುಟುಂಬ ತಾ. 25ರಂದು ಬಿಳಿಗೇರಿ ಸಮೀಪದ ನಂದಿಮೊಟ್ಟೆಯ ತೋಟದ ಮನೆಗೆ ಆಗಮಿಸಿ ಹಬ್ಬದ ಸಂಭ್ರಮದಲ್ಲಿತ್ತು.

ನಿನ್ನೆ ಬೆಳಿಗ್ಗೆ 11.30ರ ಸುಮಾರಿಗೆ ಕುಟುಂಬಸ್ಥರು ಹಬ್ಬದ ಸಂಭ್ರಮದಲ್ಲಿ ದ್ದಾಗಲೇ ಮೊಣ್ಣಪ್ಪ ಅವರ ಪುತ್ರ, ಬೆಂಗಳೂರಿನ ಖಾಸಗಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿ ನಿರೋಶ್, ಕಾಲು ತೊಳೆಯಲೆಂದು ತೋಟದ ಪಕ್ಕ ಹರಿಯುವ ನದಿಗೆ ಇಳಿದಿದ್ದಾನೆ.

ಈ ಸಂದರ್ಭ ಕಲ್ಲಿನ ಮೇಲೆ ಕಾಲು ಜಾರಿದ್ದು, ಆಕಸ್ಮಿಕವಾಗಿ ಹೊಳೆಯೊಳಗೆ ಬಿದ್ದಿದ್ದಾನೆ. ಇದನ್ನು ಕಂಡ ನಂಜಪ್ಪ ಅವರು, ಸಹೋದರನ ಮಗನ ರಕ್ಷಣೆಗೆ ಧಾವಿಸಿ ಹೊಳೆಗೆ ಇಳಿದಿದ್ದಾರೆ. ದುರದೃಷ್ಟವಶಾತ್ ನಿರೋಶ್‍ನೊಂದಿಗೆ ನಂಜಪ್ಪ ಅವರೂ ಹೊಳೆಯಲ್ಲಿ ಮುಳುಗಿ ಕುಟುಂಬಸ್ಥರ ಕಣ್ಣೆದುರೇ ಕಣ್ಮರೆಯಾಗಿದ್ದಾರೆ.

ದಿಢೀರ್ ನಡೆದ ಘಟನೆಯಿಂದಾಗಿ ಸ್ಥಳದಲ್ಲಿದ್ದ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ. ತಕ್ಷಣ ಸ್ಥಳೀಯರು ಧಾವಿಸಿ ಹೊಳೆಯಲ್ಲಿ ಹುಡುಕಾಟ ನಡೆಸಿ ಎರಡೂ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಸ್ಥಳಕ್ಕೆ ಮಾದಾಪುರ ಉಪಠಾಣೆಯ ಎಎಸ್‍ಐ ಪೊನ್ನಪ್ಪ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ನಂಜಪ್ಪ ಅವರ ಸಹೋದರ ಮೊಣ್ಣಪ್ಪ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೋಮವಾರಪೇಟೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಶೋಕಸಾಗರ ಮಡುಗಟ್ಟಿದ್ದು, ಅಂತ್ಯಕ್ರಿಯೆ ಸಂದರ್ಭ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿತ್ತು.

ಮೃತ ನಂಜಪ್ಪ ಅವರು ಪತ್ನಿ ವಿಲ್ಮ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ. ನಿರೋಶ್-ತನ್ನ ಪೋಷಕರಾದ ಮೊಣ್ಣಪ್ಪ-ಅಶ್ವಿನಿ ಸೇರಿದಂತೆ ಸಹೋದರಿಯನ್ನು ಅಗಲಿದ್ದಾನೆ.