ಮಡಿಕೇರಿ, ಅ. 26: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಕೊಡಗಿನ ಹಿರಿಮೆ ಸಾರಿದ ಕ್ಯಾಪ್ಟನ್ ಅಭಿಮನ್ಯು, ಅರ್ಜುನ ಆನೆ ನಿವೃತಿ ಬಳಿಕ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಸಾಗಿತ್ತು. 54 ವರ್ಷದ ಅಭಿಮನ್ಯುವಿಗೆ ಸಾಥ್ ನೀಡಿದ ಕೊಡಗಿನ ಕಾವೇರಿ, ಗೋಪಿ, ವಿಕ್ರಮ ಮತ್ತು ವಿಜಯ ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಕೊಡಗಿನ ಗಜಪಡೆಯದ್ದೇ ದರ್ಬಾರ್ ನಡೆಸಿದವು.750 ಕೆ.ಜಿ. ತೂಕವಿರುವ ಸಂಪೂರ್ಣ ಚಿನ್ನಲೇಪಿತ ಅಂಬಾರಿ ಯನ್ನು ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅಭಿಮನ್ಯುವಿನ ಕ್ಷಮತೆಗೆ ಮುಖ್ಯಮಂತ್ರಿ ಸಹಿತ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದರು.ಇನ್ನು 6 ವರ್ಷಗಳ ಕಾಲ ಅಭಿಮನ್ಯುವೇ ಮೈಸೂರು ದಸರಾದ ಪಟ್ಟದಾನೆಯಾಗಿ ಸೇವೆ ಸಲ್ಲಿಸಲಿದೆ. ವಿಧೇಯ ಮತ್ತು ತಾಳ್ಮೆಯ ಗುಣಕ್ಕೆ ಮತ್ತೊಂದು ಹೆಸರಾಗಿರುವ ಅಭಿಮನ್ಯುವನ್ನು ವಿಜಯದಶಮಿ ಯಂದು ಬಣ್ಣ ಬಣ್ಣದ ಸಿಂಗಾರ ದೊಂದಿಗೆ ಅಲಂಕರಿಸಲಾಗಿತ್ತು.21 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ಅಭಿಮನ್ಯುವಿಗೆ ಎರಡು ದಶಕದ ನಂತರ ಮೊದಲ ಬಾರಿಗೆ ಅಂಬಾರಿ ಹೊರುವ ಭಾಗ್ಯ ಲಭ್ಯವಾಯಿತು.(ಮೊದಲ ಪುಟದಿಂದ) ನಾಡಹಬ್ಬದಲ್ಲಿ ಅಭಿಮನ್ಯುವಿನೊಂದಿಗೆ ಜಿಲ್ಲೆಯ ಮಾವುತ ವಸಂತ ಸಾಗಿ ಗಮನ ಸೆಳೆದರು.

400 ಮೀಟರ್ ಅಂತರ ಜಂಭು ಸವಾರಿ 40 ನಿಮಿಷಕ್ಕೆ ಸೀಮಿತವಾ ಗಿತ್ತು. ಆಹ್ವಾನಿತ 300 ಅತಿಥಿ ಗಳಿಂದ ಜಂಬು ಸವಾರಿ ವೀಕ್ಷಣೆ ನಡೆಯಿತು.

ಅಭಿಮನ್ಯು ಹೊತ್ತಿದ್ದ ಚಿನ್ನದ ಅಂಬಾರಿಯಲ್ಲಿ ಇರಿಸಲಾಗಿದ್ದ ಪುಷ್ಪ ಅಲಂಕೃತ ನಾಡ ದೇವಿ ಚಾಮುಂಡೇಶ್ವರಿಗೆ ಗಣ್ಯರಿಂದ ಪುಷ್ಪಾರ್ಚನೆಯಾಯಿತು.

ಶುಭ ಕುಂಭ ಲಗ್ನದಲ್ಲಿ ಆರಂಭವಾದ ಜಂಬು ಸವಾರಿಯಲ್ಲಿ ಅಭಿಮನ್ಯು ಅಕ್ಕಪಕ್ಕದಲ್ಲಿ ವಿಜಯ ಮತ್ತು ಕಾವೇರಿ ನಡಿಗೆ ಹಾಕಿದವು.

ದಸರಾ ಗಜಪಡೆಯ ನಾಯಕ ಅಭಿಮನ್ಯುವಿಗೆ ಹಣೆಪಟ್ಟಿ, ಆಭರಣ, ಕಾಲಿನ ಗೆಜ್ಜೆ, ಕೊರಳಿನ ಗಂಟೆ ಸೇರಿದಂತೆ ಇತರೆ ಆಭರಣಗಳನ್ನು ಧರಿಸಲಾಗಿತ್ತು. ಮಾವುತರು ಮತ್ತು ಕಾವಾಡಿಗಳ ಅಣತಿಯಂತೆ ನುರಿತ ಕಲಾವಿದರು ಆನೆಗಳ ಮೇಲೆ ಚಿತ್ತಾರ ಬಿಡಿಸಿದ್ದರು. ಈ ಮೂಲಕ ಚಿನ್ನದ ಅಂಬಾರಿ ಹೊರುವÀ ಅಭಿಮನ್ಯು ಅತ್ಯಾಕರ್ಷಕವಾಗಿ ಕಂಗೊಳಿಸಿದನು.

ಇದೇ ವೇಳೆ ಅಭಿಮನ್ಯು, ಕಾವೇರಿ, ವಿಜಯ, ಗೋಪಿ ಮತ್ತು ವಿಕ್ರಮ ಆನೆಗೆ ಧಣಿವಾಗದಂತೆ ಸ್ಪೆಷಲ್ ಫುಡ್ ನೀಡಲಾಯಿತು. ಹಸಿ ಹುಲ್ಲಿನ ಕುಸೆರೆಗೆ ಅವಲಕ್ಕಿ, ಬೆಲ್ಲ, ಕಾಯಿ, ಗ್ಲೂಕೋಸ್ ಸೇರಿದಂತೆ ಹಲವು ಧಾನ್ಯಗಳನ್ನು ಬೆರೆಸಿ ಗಜಪಡೆಗೆ ನೀಡಲಾಯಿತು.