ಕುಶಾಲನಗರ, ಅ. 26: ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳ ಜವಾಬ್ದಾರಿ ಪ್ರಮುಖದ್ದಾಗಿದೆ. ಈ ನಿಟ್ಟಿನಲ್ಲಿ ಪಾರದರ್ಶಕವಾದ ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ನಿಸ್ವಾರ್ಥವಾಗಿ ಆಗಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ಕಾವೇರಿ ಚಾನಲ್ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಮಾಧ್ಯಮಗಳ ಮೂಲಕ ಕೊಡಗಿನ ಸಂಸ್ಕøತಿ, ಆಚಾರ, ವಿಚಾರವನ್ನು ನಾಡಿನಾದ್ಯಂತ ಪಸರಿಸುವ ಕೆಲಸವಾಗಲಿ ಎಂದರು.

ಕೆಲವು ಮಾಧ್ಯಮಗಳು ಜನರಿಂದ ದೂರವಾಗುತ್ತಿರುವುದು ವಾಸ್ತವ ವಿಚಾರವಾಗಿದೆ. ಸಣ್ಣ ಸುದ್ದಿಗಳನ್ನು ಅತಿಯಾಗಿ ವೈಭವೀಕರಿಸಿ ಜನತೆಗೆ ಕಿರಿಕಿರಿ ಉಂಟುಮಾಡುವುದು ನಿಲ್ಲಬೇಕಿದೆ. ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಸುದ್ದಿಗಳು ಬಿತ್ತರವಾಗಲಿ ಎಂದು ಆಶಿಸಿದ ಅವರು; ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಮಾಧ್ಯಮಗಳು ಜಾಗೃತರಾಗಬೇಕಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕಚೇರಿ ಆವರಣದಲ್ಲಿ ಶಾಸಕ ಅಪ್ಪಚ್ಚುರಂಜನ್ ಗಿಡವೊಂದನ್ನು ನೆಟ್ಟರು.

ಈ ಸಂದರ್ಭ ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ಕುಮಾರ್, ಕುಡಾ ಅಧ್ಯಕ್ಷ ಎಂ.ಎಂ. ಚರಣ್, ಪ.ಪಂ. ಸದಸ್ಯರಾದ ಅಮೃತ್‍ರಾಜ್, ಜಯವರ್ಧನ್, ಕುಡಾ ಸದಸ್ಯರಾದ ವಿ.ಡಿ.ಪುಂಡರೀಕಾಕ್ಷ, ವೈಶಾಖ್, ಪೊಲೀಸ್ ವೃತ್ತ ನಿರೀಕ್ಷಕ ಎಂ. ಮಹೇಶ್, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ, ನಿವೃತ್ತ ಮುಖ್ಯೋಪಾಧ್ಯಾಯ ನಜೀರ್ ಅಹಮ್ಮದ್, ವಿವಿಧ ಸಂಘಸಂಸ್ಥೆಗಳ ಹಾಗೂ ಕಾವೇರಿ ಮೀಡಿಯ ನೆಟ್ವರ್ಕ್ ಪ್ರಮುಖರು ಇದ್ದರು.